ಕಂಚಿನಡ್ಕದಲ್ಲಿ ನಿರ್ಮಿಸಲು ಹೊರಟಿರುವ ಟೋಲ್ ಗೇಟ್ ರದ್ದುಪಡಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಉಡುಪಿ: ಪಡುಬಿದ್ರಿ- ಕಾರ್ಕಳ ರಾಜ್ಯ ಹೆದ್ದಾರಿ ಕಂಚಿನಡ್ಕದಲ್ಲಿ ಸ್ಥಾಪಿಸಲುದ್ದೇಶಿಸಿರುವ ಟೋಲ್ ಗೇಟ್ ರದ್ದು ಪಡಿಸುವಂತೆ ಮತ್ತು ಈ ರಸ್ತೆಯಲ್ಲಿ ಟೋಲ್ ಸ್ಥಾಪನೆ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಕಂಚಿನಡ್ಕದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಹಿಂದಿನ ಯಡಿಯೂರಪ್ಪ ಸರಕಾರ ಅವಧಿಯಲ್ಲಿ ಟೋಲ್ ಗೇಟ್ ಪ್ರಕ್ರಿಯೆ ಆರಂಭಗೊಂಡಿದ್ದು, ಬೆಳ್ಮಣ್ ನಲ್ಲಿ ಟೋಲ್ ಹೋರಾಟಗಾರರ ಪ್ರತಿಭಟನೆಗೆ ಮಣಿದು ಬೊಮ್ಮಾಯಿ ಸರಕಾರ ಅದನ್ನು ಕಂಚಿನಡ್ಕಕ್ಕೆ ಸ್ಥಳಾಂತರ ಮಾಡಿತ್ತು. ಆದರೆ, ಯಾವುದೇ ಕಾರಣಕ್ಕೂ ಕಂಚಿನಡ್ಕದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Oplus_0

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಪಡುಬಿದ್ರಿ ಭಾಗದ ಹೆಜಮಾಡಿಯಲ್ಲಿ ಟೋಲ್ ಇರುವಾಗ ಮೂರು ಕಿ.ಮೀ. ಅಂತರದಲ್ಲಿ ಮತ್ತೊಂದು ಟೋಲ್ ಅಳವಡಿಕೆ ಮೂಲಕ ಜನರನ್ನು ಸುಲಿಗೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದನ್ನು ಖಂಡಿಸಿ ಈ ಹೋರಾಟಕ್ಕೆ ಚಾಲನೆ ನೀಡಲಾಗಿದ್ದು, ನಾಳೆ ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ಸಂದರ್ಭ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ ಕುಮಾ‌ರ್ ಕೊಡವೂರು, ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ, ನವೀನ್ ಚಂದ್ರ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಹರೀಶ್ ಕಿಣಿ, ದೇವಿ ಪ್ರಸಾದ್‌ ಶೆಟ್ಟಿ ಬೆಳಪು, ನವೀನ್ ಚಂದ್ರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.