ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಮಣಿಸಿದ ಭಾರತ ಮೂರನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಮೂಲಕ ಪ್ರಬಲ ಆಸ್ಟ್ರೇಲಿಯಾದ ದಾಖಲೆ ಮುರಿದಿದೆ.
ಮಾ.9 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ನೀಡಿದ್ದ 252 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಭಾರತ ತಂಡ 49 ಓವರ್ ನಲ್ಲೇ 6 ವಿಕೆಟ್ ಕಳೆದುಕೊಂಡು 254 ರನ್ ಗಳಿಸಿ 4 ವಿಕೆಟ್ ಗಳ ಅಂತರದಲ್ಲಿ ಗೆದ್ದು ಬೀಗಿತು. ಆ ಮೂಲಕ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗೆ ಮುತ್ತಿಟ್ಟಿದೆ.
ದೇಶಾದ್ಯಂತ ಸಂಭ್ರಮಾಚರಣೆ:
ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುತ್ತಿದ್ದಂತೆಯೇ ದೇಶಾದ್ಯಂತ ಸಂಭ್ರಮಾಚರಣೆ ನಡೆದವು.
ರಾಷ್ಟ್ರ ರಾಜಧಾನಿ ನವದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ತ್ರಿವರ್ಣ ಧ್ವಜ ಹಿಡಿದು ರಸ್ತೆಗಿಳಿದು, ಟೀಂ ಇಂಡಿಯಾ ಪರ ಘೋಷಣೆ ಕೂಗುವ ಮೂಲಕ ಸಂಭ್ರಮಿಸಿದ್ದಾರೆ.
ಹರ್ಷೋದ್ಗಾರಗಳೊಂದಿಗೆ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ್ದಾರೆ. ಕೆಲವೆಡೆ ಸಿಹಿ ಹಂಚಿ ಸಂಭ್ರಮಪಟ್ಟಿದ್ದಾರೆ.












