ಉಡುಪಿ: ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕ 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಆ ಪ್ರಯುಕ್ತ ಈಗಾಗಲೇ ಅಮೃತ ಮಹೋತ್ಸವ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಉದ್ಘಾಟನೆ ಹಾಗೂ ಅಮೃತ ಮಹೋತ್ಸವ ಕಾರ್ಯಾಲಯದ ಉದ್ಘಾಟನೆ ಇದೇ ಏಪ್ರಿಲ್ 27ರಂದು ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ಚಂದಯ್ಯ ಹೆಗ್ಡೆ ಸಭಾಭವನದಲ್ಲಿ ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 1950ರಲ್ಲಿ ಪ್ರಾರಂಭವಾದ ಹಿರಿಯಡಕ ಬೋರ್ಡ್ ಹೈಸ್ಕೂಲ್, 1975ರಲ್ಲಿ ಪದವಿ ಪೂರ್ವ ಕಾಲೇಜು ಆಗಿ ಪರಿವರ್ತನೆಗೊಂಡಿತ್ತು. ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂಬ ಹೆಸರಿನಲ್ಲಿ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಕಾಲೇಜಿನವರೆಗೆ ಸುಮಾರು 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸವನ್ನು ನೀಡುತ್ತಿದ್ದು ಪ್ರಸ್ತುತ ವರ್ಷದಲ್ಲಿ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ವರ್ಷಪೂರ್ತಿ ಆಚರಿಸಲಿದೆ ಎಂದರು.
ನೂತನ ಅಮೃತ ಮಹೋತ್ಸವ ಸಮಿತಿ ಹಾಗೂ ಕಾರ್ಯಾಲಯದ ಉದ್ಘಾಟನೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ವಹಿಸಿಕೊಳ್ಳಲಿದ್ದಾರೆ. ಕೃಷಿ ಅರ್ಥಶಾಸ್ತ್ರಜ್ಞ ಡಾ. ಎನ್.ಎಸ್ ಶೆಟ್ಟಿ, ಗೌರವಾಧ್ಯಕ್ಷರಾದ ಎ. ಬಾಲಕೃಷ್ಣ ಹೆಗ್ಡೆ ಬೆಂಗಳೂರು, ಪಳ್ಳಿ ನಟರಾಜ ಹೆಗ್ಡೆ, ಶಾಲಾ ಪ್ರಾಂಶುಪಾಲ ಮಂಜುನಾಥ್ ಭಟ್, ಉಪಪ್ರಾಂಶುಪಾಲ ಪ್ರಕಾಶ್ ಪ್ರಭು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್ ಶ್ರೀನಿವಾಸ್ ರಾವ್, ಶಾಲಾ ಅಭಿವೃದ್ಧಿ ಸಮಿತಿಯ ಉಪ ಅಧ್ಯಕ್ಷ ಬಿ. ಎಲ್ ವಿಶ್ವಾಸ್ ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ನಟರಾಜ್ ಹೆಗ್ಡೆ, ಶಾಲಾ ಪ್ರಾಂಶುಪಾಲ ಮಂಜುನಾಥ್ ಭಟ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬಿ.ಎಲ್. ವಿಶ್ವಾಸ್, ಪ್ರಧಾನ ಕಾರ್ಯದರ್ಶಿ ನಾಗರಾಜೇಂದ್ರ ಎಂ ಆರ್., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್ ಶ್ರೀನಿವಾಸ್ ರಾವ್, ಉಪಪ್ರಾಂಶುಪಾಲ ಪ್ರಕಾಶ್ ಪ್ರಭು ಉಪಸ್ಥಿತರಿದ್ದರು.












