ಎ.10ರಂದು ಉಡುಪಿಗೆ ‘ಜನಾಕ್ರೋಶ ಯಾತ್ರೆ’ ಆಗಮನ

ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರ ಬೆಲೆ ಏರಿಕೆ, ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿ ಮಾಡುತ್ತಿದೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ಜನಾಕ್ರೋಶ ಯಾತ್ರೆ’ಯು ಎ.10ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಬಿ.ವೈ ವಿಜಯೇಂದ್ರ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ನಂತರ ಕಲ್ಸಂಕ, ಕಡಿಯಾಳಿ ಮಾರ್ಗವಾಗಿ ಬಿಜೆಪಿ ಕಚೇರಿಯ ಹಿಂಭಾಗದ ಮೈದಾನದವರೆಗೆ ಪ್ರತಿಭಟನಾ ಜಾಥಾ ಸಾಗಿ ಬರಲಿದೆ. ಬಳಿಕ ಮೈದಾನದಲ್ಲಿ ಬಹೃತ್ ಪ್ರತಿಭಟನಾ ಸಮಾವೇಶ ನಡೆಯಲಿದೆ ಎಂದರು.

ಜಾಥಾದಲ್ಲಿ ವಿವಿಧ ಮೋರ್ಚಾ, ಮಂಡಲಗಳಿಂದ ವಿನೂತನ ಟ್ಯಾಬ್ಲೋ ನಿರ್ಮಿಸಿ, ಅದರ ಮೂಲಕ ಸರಕಾರದ ಜನವಿರೋಧಿ ನೀತಿಗೆ ಖಂಡನೆ ವ್ಯಕ್ತಪಡಿಸಲಾಗುವುದು. ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ತಂಡದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ್ ಶೆಟ್ಟಿ, ರಾಘವೇಂದ್ರ ಕಿಣಿ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.