ಉಡುಪಿ: ಕಲುಷಿತ ನೀರು ಕುಡಿದು ನೂರಾರು ಮಂದಿ ಗ್ರಾಮಸ್ಥರು ಅಸ್ವಸ್ಥಗೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಮತ್ತು 7ನೇ ವಾರ್ಡ್ ನಲ್ಲಿ ಕುಡಿಯುವ ನೀರು ಕಲುಷಿತಗೊಂಡಿದೆ. ಇಲ್ಲಿನ ಕಾಸಿನಾಡಿ ಎಂಬಲ್ಲಿರುವ ಟ್ಯಾಂಕ್ ನಿಂದ ಬಿಡಲಾಗುವ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದರ ಪರಿಣಾಮ ಕರ್ಕಿ ಕಳ್ಳಿ ಮತ್ತು ಮಡಿಕಲ್ ಎನ್ನುವ ಪ್ರದೇಶದಲ್ಲಿ ನೂರಾರು ಮಂದಿ ಅಸ್ವಸ್ಥಗೊಂಡಿದ್ದಾರೆ. ವಾರ್ಡ್ ನ ಪ್ರತಿ ಮನೆಯಲ್ಲೂ 3 ಕ್ಕೂ ಅಧಿಕ ಮಂದಿ ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ. 80 ವರ್ಷದ ವಯೋವೃದ್ಧರಿಗೆ ರಕ್ತಭೇದಿ ಉಂಟಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಶುದ್ಧ ನೀರು ಪೂರೈಕೆ ವಿರುದ್ಧ ಗ್ರಾಮಸ್ಥರ ಆಕ್ರೋಶಗೊಂಡಿದ್ದು, ಕೂಡಲೇ ಕಾಸಿನಾಡಿ ಓವರ್ ಹೆಡ್ ನೀರಿನ ಟ್ಯಾಂಕ್ ನೀರು ಸರಬರಾಜು ಬಂದ್ ಮಾಡಿ, ಸೂಕ್ತ ತನಿಖೆಗೆ ಮಾಡುವಂತೆ ಆಗ್ರಹಿಸಿದ್ದಾರೆ.