ಉತ್ತರ ಪ್ರದೇಶ: ತಂದೆಯನ್ನೇ ಜೀವಂತ ಸುಟ್ಟ ಬಾಲಕ !ಅಸಲಿ ಕಾರಣವೇನು?

ಲಕ್ನೋ: ಕಳ್ಳತನ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅಪ್ರಾಪ್ತ ಬಾಲಕ, ತನ್ನ ತಂದೆಯನ್ನೇ ಜೀವಂತ ಸುಟ್ಟ ಘಟನೆ ಉತ್ತರ ಪ್ರದೇಶದ ಫರೀದಾಬಾದ್ ನಲ್ಲಿ ನಡೆದಿದೆ.

ಫರೀದಾಬಾದ್‌ನ ಅಜಯ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮುಹಮ್ಮದ್ ಅಲೀಮ್ ಅವರು ಮೃತಪಟ್ಟವರು ಎಂದು ತಿಳಿದು ಬಂದಿದೆ. ಕಳ್ಳತನದ ಶಂಕೆಯಿಂದ ತನ್ನ 14 ವರ್ಷದ ಮಗನನ್ನು ಗದರಿಸಿದ್ದಕ್ಕಾಗಿ, ಬಾಲಕ ತನ್ನ ತಂದೆಯನ್ನು ಜೀವಂತವಾಗಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಮಾಲೀಕ ರಿಯಾಝುದ್ದೀನ್ ಸಲ್ಲಿಸಿದ ದೂರಿನ ಪ್ರಕಾರ, ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. 55 ವರ್ಷದ ಮುಹಮ್ಮದ್ ಅಲೀಮ್ ಅವರ ಕಿರುಚಾಟ ಕೇಳಿ ಇದ್ದಕ್ಕಿದ್ದಂತೆ ಎಚ್ಚರಗೊಂಡಾಗ ಘಟನೆ ಬೆಳಕಿಗೆ ಬಂದಿದೆ.“ಅಲೀಮ್ ವಾಸಿಸುತ್ತಿದ್ದ ಬಾಡಿಗೆ ಕೋಣೆಯ ಟೆರೇಸ್‌ಗೆ ಹೋಗಲು ಪ್ರಯತ್ನಿಸಿದಾಗ, ಬಾಗಿಲು ಲಾಕ್ ಆಗಿರುವುದು ಕಂಡು ಬಂತು. ನೆರೆಹೊರೆಯವರ ಸಹಾಯದಿಂದ, ನಾನು ಟೆರೇಸ್ ತಲುಪಿದಾಗ ಕೋಣೆಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದೆ. ಬಾಗಿಲು ಹೊರಗಿನಿಂದ ಲಾಕ್ ಆಗಿತ್ತು ಮತ್ತು ಅಲೀಮ್ ಒಳಗಿನಿಂದ ಕಿರುಚುತ್ತಿದ್ದರು” ಎಂದು ಅವರು ವಿವರಿಸಿದರು.

ಬಾಗಿಲು ತೆರೆದ ತಕ್ಷಣ, ತೀವ್ರ ಸುಟ್ಟ ಗಾಯಗಳಿಂದ ಅಲೀಮ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ 14 ವರ್ಷದ ಪುತ್ರ ಬೇರೊಬ್ಬರ ಮನೆಗೆ ಹಾರಿ ತಪ್ಪಿಸಿಕೊಂಡಿದ್ದಾನೆ ಎಂದು ರಿಯಾಝುದ್ದೀನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಜೇಬಿನಿಂದ ಹಣ ಕದ್ದಿದ್ದಕ್ಕಾಗಿ ಅಲೀಮ್ ತನ್ನ ಮಗನನ್ನು ಗದರಿಸಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಕೋಪದಿಂದ ಬೆಂಕಿ ಹಚ್ಚಿದ್ದಾನೆ ಎಂದು ಶಂಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಉತ್ತರ ಪ್ರದೇಶದ ಮಿರ್ಜಾಪುರದ ಮೂಲದ ಅಲೀಮ್ ತನ್ನ ಮಗನೊಂದಿಗೆ ಫರಿದಾಬಾದ್‌ಗೆ ಬಂದು ಅಜಯ್ ನಗರ ಭಾಗ 2 ರಲ್ಲಿರುವ ರಿಯಾಝುದ್ದೀನ್ ಅವರ ಮನೆಯ ಟೆರೇಸ್‌ನಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆದಿದ್ದರು.

ವಾರದ ಮಾರುಕಟ್ಟೆಗಳಲ್ಲಿ ಸೊಳ್ಳೆ ಪರದೆಗಳು ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಲೀಮ್ ಅವರು ಧಾರ್ಮಿಕ ಸ್ಥಳಗಳಿಗೆ ದೇಣಿಗೆ ಸಂಗ್ರಹಿಸುತ್ತಿದ್ದರು. ಅವರ ಪತ್ನಿ ಹಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ನಾಲ್ವರು ವಿವಾಹಿತ ಮಕ್ಕಳು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.