ಉಡುಪಿ: ಉಡುಪಿಯಲ್ಲಿ ಬೀಸಿದ ಸುಂಟರಗಾಳಿ ಸಹಿತ ಮಳೆಗೆ ಪುತ್ತಿಗೆ ವಿಷ್ಣುಮೂರ್ತಿ ದೇವಸ್ಥಾನದ ಧ್ವಜಸ್ತಂಭ ಮುರಿದು ಬಿದ್ದಿದೆ. ಹಿರಿಯಡ್ಕ ಸಮೀಪದ ಪುತ್ತಿಗೆ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದೆ. ರಥೋತ್ಸವಕ್ಕೂ ಎಲ್ಲಾ ಏರ್ಪಾಟು ಮಾಡಿಕೊಳ್ಳಲಾಗಿತ್ತು.
ಈ ಸಂದರ್ಭ ಏಕಾಏಕಿ ಸುಂಟರಗಾಳಿ ಬೀಸಿದ್ದು, ವಿಪರೀತ ಗಾಳಿಗೆ ದೇವಸ್ಥಾನದ ಮುಂಭಾಗದ ಧ್ವಜಸ್ಥಂಭ ತುಂಡಾಗಿ ಬಿದ್ದಿದೆ. ರಥ ಕೂಡ ಗಾಳಿಗೆ ವಾಲಿದ್ದು, ಈ ಸಂದರ್ಭ ಪ್ರಧಾನ ಅರ್ಚಕರು ದೇವರ ಉತ್ಸವ ಮೂರ್ತಿಯನ್ನು ರಥದೊಳಗೇ ಹಿಡಿದು ಕುಳಿತಿದ್ದರು. ಸುಮಾರು ನೂರು ವರ್ಷದ ಹಿಂದೆ ದೇಗುಲದ ಧ್ವಜಸ್ತಂಭವನ್ನು ರಚನೆ ಮಾಡಲಾಗಿದ್ದು ಹೊಸ ಕಂಬ ರಚನೆ ಮಾಡುವ ಬಗ್ಗೆ ದೇಗುಲದಲ್ಲಿ ಮಾತುಕತೆ ನಡೆಯುತ್ತಿತ್ತು. ವಾರ್ಷಿಕ ಉತ್ಸವ ನಡೆಯುತ್ತಿರುವ ಕಾರಣ, ತಾತ್ಕಾಲಿಕವಾಗಿ ಅಡಿಕೆ ಮರವನ್ನು ಧ್ವಜಸ್ತಂಭದ ಜಾಗದಲ್ಲಿ ನೆಟ್ಟು ಉತ್ಸವವನ್ನು ನಡೆಸಲಾಯ್ತು.












