ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮಧ್ವನವಮಿ ಉತ್ಸವ ವೈಭವದಿಂದ ನಡೆಯಿತು. ಮಧ್ವನವಮಿ ಪ್ರಯುಕ್ತ ಪಾರಾಯಣ, ಮಧುಅಭಿಷೇಕ ಮಾಡಲಾಯಿತು. ಇನ್ನು ಅನಂತೇಶ್ವರ ದೇವಾಲಯದ ಆವರಣದಲ್ಲಿರುವ ಆಚಾರ್ಯ ಮಧ್ವರ ಸನ್ನಿಧಾನದಲ್ಲಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿ ಆಚಾರ್ಯ ಮಧ್ವರಿಗೆ ದಂಡೋದಕವನ್ನು ನೀಡಿದರು.

ಈ ವೇಳೆ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರಿಂದ ವಿಷ್ಣು ಸಹಸ್ರನಾಮ ಚಿಂತನೆ ಮತ್ತು ವಿಪ್ರರಿಂದ ಪಾರಾಯಣ ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ನಡೆಯಿತು. ಆಚಾರ್ಯ ಮಧ್ವರು ಹನುಮಂತ ದೇವರ ಅವತಾರದ ಹಿನ್ನಲೆಯಲ್ಲಿ ಶ್ರೀ ಕೃಷ್ಣ ಮಠದ ಪ್ರಾಣದೇವರಿಗೆ ಮಾಡಲಾಗಿದ್ದ ಆಚಾರ್ಯ ಮಧ್ವರ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು.
ಕೃಷ್ಣಮಠದಲ್ಲಿ ಶ್ರೀ ಕೃಷ್ಣ ದೇವರಿಗೆ ಪುತ್ತಿಗೆ ಮಠದ ಕಿರಿಯ ಸುಶೀಂದ್ರತೀರ್ಥ ಶ್ರೀಪಾದರು ಗೋಪಾಲಕೃಷ್ಣ ಅಲಂಕಾರವನ್ನು ಮಾಡಿ ಆರತಿಯನ್ನು ಬೆಳಗಿದರು.

ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಹಿತೋಷ್ ಆಚಾರ್ಯ, ರತೀಶ್ ತಂತ್ರಿ, ವಿಷ್ಣು ಮೂರ್ತಿ,ವಿದ್ವಾನ್ ಗೋಪಾಲ ಆಚಾರ್ಯ, ರಮೇಶ್ ಭಟ್ ರವೀಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.













