ಉಡುಪಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಅಸ್ವಸ್ಥಗೊಂಡು ಮೃತ್ಯು

ಉಡುಪಿ: ಮುಂಬೈಯಿಂದ ಎರ್ನಾಕುಲಂಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮಹಿಳೆ ಮಗನೊಂದಿಗೆ ಮುಂಬೈಯಿಂದ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ.

ಪ್ರಯಾಣದ ಹಾದಿಯಲ್ಲಿ ಅಸ್ವಸ್ಥಗೊಂಡ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು, ಆರೋಗ್ಯ ಸ್ಥಿತಿಯನ್ನು ಅರಿತು, ಕೃತಕ ಉಸಿರಾಟದ‌ ವ್ಯವಸ್ಥೆಗೊಳಿಸಿದ್ದರು. ರೈಲ್ವೇ ವೈದ್ಯಾಧಿಕಾರಿ ಡಾ. ಸ್ಟಿವನ್ ಜಾರ್ಜ್ ಅವರು‌ ಇಂದ್ರಾಳಿ ರೈಲು ನಿಲ್ದಾಣದಲ್ಲಿ ರೈಲು ನಿಂತಾಗ ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ‌ ಮಹಿಳೆಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೆರವಿನಿಂದ, ಮಣಿಪಾಲ ಆಸ್ಪತ್ರೆಗೆ ಸಾಗಿಸಿದರು.

ಪರೀಕ್ಷಿಸಿದ ವೈದ್ಯರು ಮಹಿಳೆ ಅದಾಗಲೇ ಮೃತಪಟ್ಟಿರುವುದನ್ನು ದೃಢೀಕರಿಸಿದರು.
ಏಕನಾಥ್ ಔಷಧಿ ಮಳಿಗೆಯ ಸಿಬ್ಬಂದಿ, ನಿಲ್ದಾಣ ನಿಯಂತ್ರಕ ಬಾನು ಪ್ರಕಾಶ್, ರೈಲ್ವೇ ರಕ್ಷಣಾ ಘಟಕದ ಸುಧೀರ್ ಶೆಟ್ಟಿ ಅವರು, ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಬದುಕಿಸುವ‌ ಪ್ರಯತ್ನ ನಡೆಸಿದ್ದರು.