ಉಡುಪಿ: ಭಾಷಾ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ವಿದ್ವಾಂಸರೂ, ಸಂಗೀತ ಪ್ರಿಯರೂ ಆದ ಡಾ. ಸುಶೀಲಾ ಉಪಾಧ್ಯಾಯರ ಸಂಸ್ಮರಣೆಯಲ್ಲಿ ಅವರ ಪತಿ ಡಾ.ಯು.ಪಿ. ಉಪಾಧ್ಯಾಯ ಸ್ಥಾಪಿಸಿದ ರಾಗ ಧನ ಪಲ್ಲವಿ ಪ್ರಶಸ್ತಿಗೆ ಈ ಬಾರಿ ಗಾಯಕಿ ವಿದುಷಿ ಶ್ರುತಿ ಎಸ್ ಭಟ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯನ್ನು ಸ್ಥಳೀಯ ಪ್ರತಿಭಾವಂತ ಶಾಸ್ತ್ರೀಯ ಸಂಗೀತ ಸಾಧಕರಿಗೆ ರಾಗ ಧನ ಸಂಸ್ಥೆಯು ಪ್ರತಿ ವರ್ಷ ನೀಡುತ್ತಿದೆ. ಈ ವರ್ಷದ ಪ್ರಶಸ್ತಿಯನ್ನು ಶ್ರುತಿ ಭಟ್ ಅವರಿಗೆ ಫೆ.7ರಂದು ಸಂಜೆ 5 ಗಂಟೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿರುವ 37ನೇಯ ಪುರಂದರ ದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವದ ಸಂದರ್ಭದಲ್ಲಿ ನೀಡಲಾಗುವುದು.
ಖ್ಯಾತ ಹಿರಿಯ ಕೊಳಲು ವಿದ್ವಾಂಸ ಯು ರಾಘವೇಂದ್ರ ರಾವ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಂತರ ಶ್ರುತಿ ಎಸ್ ಭಟ್ ಅವರ ಸಂಗೀತ ಕಛೇರಿ ನಡೆಯಲಿದೆ ಎಂದು ರಾಗಧನ ಸಂಸ್ಥೆಯ ಪ್ರಕಟಣೆ ತಿಳಿಸಿದೆ.












