ಉಡುಪಿ: ಯುವನಿಧಿ ಯೋಜನೆಗೆ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಿರಿ – ಜಿಲ್ಲಾಧಿಕಾರಿ

ಉಡುಪಿ: ಸರ್ಕಾರದ ಮಹತ್ತರ ಯೋಜನೆಯಾದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, 2022-23 ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮಾ ಪಡೆದವರು ಸೇವಾ ಸಿಂಧು ಮೂಲಕ ಜಾಲತಾಣದಲ್ಲಿ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅವರು ಇಂದು ವರ್ಚುವಲ್ ಮೂಲಕ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯ ಅನುಷ್ಠಾನಗೊಳಿಸುವ ಕುರಿತು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಯುವನಿಧಿ ಯೋಜನೆ ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಜಾರಿಗೆ ತಂದಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಗೊ೦ಡಿದ್ದು ಜಿಲ್ಲೆಯ ಅರ್ಹ ಪದವೀಧರರು ಸೇವಾ ಸಿಂಧು ಪೋರ್ಟಲ್‌ಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಯೋಜನೆಗೆ ಜನವರಿ 12 ರ ಯುವ ದಿನಾಚರಣೆಯಂದು ಶಿವಮೊಗ್ಗದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಫಲಾನುಭವಿಗಳ ಖಾತೆಗೆ ಹಣ ವರ್ಗವಣೆ ಮಾಡಲಿದ್ದಾರೆ ಎಂದರು.

ಯುವನಿಧಿಗೆ ಅರ್ಜಿ ಸಲ್ಲಿಸುವಾಗ ಸೇವಾಸಿಂಧು ಪೋರ್ಟಲ್ ನಲ್ಲಿ ನ್ಯಾಷನಲ್ ಅಕಾಡೆಮಿಕ್ ಡೆಪೊಸೆಟರಿಯ ಲಿಂಕ್‌ಅನ್ನು ಬಳಕೆ ಮಾಡುವುದರೊಂದಿಗೆ ಸರಳವಾಗಿ ಅರ್ಜಿ ಸಲ್ಲಿಸಲು ಅನುಕೂಲವಾಗಲಿದೆ. ಇದನ್ನು ಪ್ರತಿಯೊಬ್ಬರೂ ಬಳಕೆ ಮಾಡಬಹುದು ಎಂದ ಅವರು, ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್ ಗೆ ನ್ಯಾಡ್ ಪೋರ್ಟಲ್ ನಲ್ಲಿ ಬಿಟ್ಟುಹೋಗಿರುವ ವಿದ್ಯಾರ್ಥಿಗಳ ಶೈಕ್ಷಣಿಕ ವಿವರವನ್ನು
ನೋಂದಾಯಿಸಲು ಪತ್ರ ಬರೆಯುದಾಗಿ ತಿಳಿಸಿದರು.

2023 ರಲ್ಲಿ ಪದವಿ ಅಥವಾ ಡಿಪ್ಲೋಮಾ ಉತ್ತೀರ್ಣರಾದ ಸರ್ಕಾರಿ, ಖಾಸಗಿ ಹಾಗೂ ಸ್ವಯಂ ಉದ್ಯೋಗ ಹೊಂದದೆ ಇರುವ ರಾಜ್ಯದಲ್ಲಿ ವಾಸವಾಗಿರುವ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಅಥವಾ ಡಿಪ್ಲೋಮಾ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಅಗತ್ಯ ದಾಖಲೆಗಳು ಸೇರಿದಂತೆ ಮತ್ತಿತರ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದಾಗಿದೆ
ಎಂದರು.

ಸಭೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಕಲಂದರ್ ಖಾನ್, ಉಡುಪಿ ಲೀಡ್ ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಹಾಗೂ ಮತ್ತಿತರು ಉಪಸ್ಥಿತರಿದ್ದರು.