ಉಡುಪಿ: ಉಡುಪಿಯ ಸಿಎಸ್ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯಲ್ಲಿ ಲೊಂಬಾರ್ಡ್ ಹೋಮ್ ಕೇರ್(ಮನೆ ಆರೈಕೆ) ಸೇವೆಗಳು ಮತ್ತು ಹೊಸ ನೇತ್ರಶಾಸ್ತ್ರ ವಿಭಾಗವು ಇಂದು ಆಸ್ಪತ್ರೆ ಆವರಣದಲ್ಲಿ ಉದ್ಘಾಟನೆಗೊಂಡಿತು.
ನೂತನ ಸೇವೆಗಳನ್ನು ಉದ್ಘಾಟಿಸಿದ ಸಿಎಸ್ಎ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ್ಯದ ಬಿಷಪ್ ಅತಿ ವಂ.ಹೇಮಚಂದ್ರ ಕುಮಾರ್ ಆಶೀವರ್ಚನ ನೀಡಿ, ನಮಗೆ ದೊರೆತ ವಿದ್ಯೆ ಸೇರಿದಂತೆ ಎಲ್ಲ ರೀತಿಯ ಸ್ಥಾನಮಾನಗಳು ದೇವರು ಕೊಟ್ಟ ಕೊಡುಗೆಯಾಗಿದೆ. ಅದನ್ನು ಸೇವೆಯ ಮೂಲಕ ಸಮಾಜಕ್ಕೆ ನೀಡುವ ಕಾರ್ಯ ಮಾಡಬೇಕು. ಈ ಮೂಲಕ ದೇವರನ್ನು ಸ್ಮರಿಸಬೇಕು ಎಂದು ಹೇಳಿದರು.
ದೃಷ್ಠಿ ಎಂಬುದು ಜೀವನ. ಅದು ಇಲ್ಲದಿದ್ದರೆ ಜೀವನವೇ ಇಲ್ಲ. ಆದುದರಿಂದ ಕಣ್ಣಿಗೆ ನಾವು ಅತ್ಯಂತ ಪ್ರಾಮುಖ್ಯತೆ ನೀಡಬೇಕು. ಇಲ್ಲಿ ಹೋಮ್ ಕೇರ್ ಹಾಗೂ ನೇತ್ರ ವಿಭಾಗದ ಸೇವೆಗಳನ್ನು ಆರಂಭಿಸಿರುವುದು ಅತ್ಯುತ್ತಮವಾಗಿದೆ. ಇದು ಮನೆಮನೆ ತಲುಪಿಸುವ ಕಾರ್ಯಕ್ರಮ ಆಗಿದೆ. ಈ ಆಸ್ಪತ್ರೆ ಇನ್ನಷ್ಟು ವಿಸ್ತಾರವಾಗಲಿ ಎಂದು ಅವರು ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತ್ತನ್ನ ಮಾತನಾಡಿ, ಹಾಸಿಗೆ ಹಿಡಿದಿರುವ ರೋಗಿಗಳು, ವೃದ್ಧರು ಆರೋಗ್ಯ ತಪಾಸಣೆ ನಡೆಸಲು ಆಸ್ಪತ್ರೆಗೆ ಬರಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಹೋಮ್ ಕೇರ್ ಸರ್ವಿಸ್ ಇಂದಿನ ಅತೀ ಅಗತ್ಯವಾಗಿದೆ. ಅದನ್ನು ಗುರುತಿಸಿಯೇ ನಮ್ಮ ಆಸ್ಪತ್ರೆ ಯಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.
ನಮ್ಮ ಹೋಮ್ಕೇರ್ ಸೇವೆಯಲ್ಲಿ ನರ್ಸಿಂಗ್ ಕೇರ್, ಫಿಜಿಯೋಥೆರಪಿ ನೀಡಲಾಗುವುದು. ಅದೇ ರೀತಿ ಔಷಧಿಗಳನ್ನು ಕೂಡ ಮನೆಗೆ ತಲುಪಿಸಲಾಗುತ್ತದೆ. ಇಡೀ ಜಿಲ್ಲೆಯಲ್ಲಿ ಪ್ರಥಮ ಎಂಬಂತೆ ವೈದ್ಯರೇ ಮನೆಮನೆಗೆ ತೆರಳಿ ಪರೀಕ್ಷೆ ಮಾಡಲಿದ್ದಾರೆ. ಆರಂಭದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿದ್ದು, ಮುಂದೆ ಅವಧಿಯನ್ನು ವಿಸ್ತರಿಸಲು ಯೋಜಿಸಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಸ್ಪತ್ರೆಯ ನೇತ್ರತಜ್ಞರಾದ ಡಾ.ನರೇಂದ್ರ ಶೆಣೈ ಡಾ.ಆರ್ಥರ್ ರೋಡ್ರಿಗಸ್ ಮಾತನಾಡಿದರು. ಸಿಎಸ್ಎ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ್ಯದ ಮಹಿಳಾ ಅನ್ಯೋನ ಕುಟುಂಬದ ಅಧ್ಯಕ್ಷೆ ಭಾರತಿ ಹೇಮ ಚಂದ್ರ, ಹಿರಿಯ ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್, ರೆ.ಐವನ್ ಸೋನ್ಸ್ ಉಪಸ್ಥಿತರಿದ್ದರು.
ಬಿಎಸ್ಸಿ ನರ್ಸಿಂಗ್ ಕಾಲೇಜಿನ ಅಸೋಸಿಯೇಟ್ ಪ್ರೋಫೆಸರ್ ಸೆಲೆಸ್ಟಿನ್ ಸುಸಾನ್ ಸ್ವಾಗತಿಸಿದರು. ಆಸ್ಪತ್ರೆಯ ಪಿಆರ್ಓ ರೋಹಿ ರತ್ನಾಕರ್ ವಂದಿಸಿದರು. ಲಿಯೋನಾ ಸ್ಟ್ರೆಲಿಟಾ ಕಾರ್ಯಕ್ರಮ ನಿರೂಪಿಸಿದರು.