ಉಡುಪಿ ಬನ್ನಂಜೆಯಲ್ಲಿ ಸಾಂಪ್ರದಾಯಿಕ ತಿಂಡಿ-ತಿನಿಸು ಹಾಗೂ ಕರಕುಶಲ ವಸ್ತುಗಳ ಮಳಿಗೆ ‘ಉಡುಪಿ ಸ್ಟೋರ್ಸ್ ಉದ್ಘಾಟನೆ

ಉಡುಪಿ: ಉಡುಪಿ ವಿ21 ಗ್ರೂಪ್ ನವರಿಂದ ಸಾಂಪ್ರದಾಯಿಕ ತಿಂಡಿ-ತಿನಿಸು ಹಾಗೂ ಕರಕುಶಲ ವಸ್ತುಗಳ ನೂತನ ಮಳಿಗೆ “ಉಡುಪಿ ಸ್ಟೋರ್ಸ್*ನ ಬನ್ನಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ನೆಲ ಮಹಡಿಯಲ್ಲಿ ಶುಕ್ರವಾರ ಉದ್ಘಾಟನೆ ನಡೆಯಿತು.

ಈ ಮಳಿಗೆ ದಿನದ 24 ಗಂಟೆಯೂ ತೆರೆದಿರುತ್ತದೆ. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು. ಉಡುಪಿಯ ಆಹಾರೋತ್ಪನ್ನಗಳಿಗೆ ಎಲ್ಲ ಕಡೆ ಬೇಡಿಕೆಯಿದೆ. ಸಮಾಜಕ್ಕೆ ಶುಚಿ-ರುಚಿಯಾದ ಗುಣಮಟ್ಟದ ಆರೋಗ್ಯಪೂರ್ಣ ಆಹಾರವನ್ನು ಒದಗಿಸುವ ಮಹದಾಸೆಯಿಂದ ಆರಂಭಿಸಲ್ಪಟ್ಟ ಈ ಮಳಿಗೆ ಯಶಸ್ವಿಯಾಗಲಿದೆ ಎಂದು ಹಾರೈಸಿದರು.

ಶಾಸಕ ಯಶ್ ಪಾಲ್ ಎ. ಸುವರ್ಣ ಮಾತನಾಡಿ, ಉಡುಪಿಯ ಸ್ಥಳೀಯ ಉತ್ಪನ್ನಗಳನ್ನು ಜನತೆಗೆ ಮುಟ್ಟಿಸುವ ಕಾರ್ಯಕ್ಕೆ ಹೊರಟ ಮಳಿಗೆ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಉಡುಪಿ ಡಿಪೋ ಮ್ಯಾನೇಜರ್ ಶಿವರಾಮ್ ನಾಯ್ಕ್ ಶುಭಾಶಂಸನೆಗೈದರು. ವಿ21 ಗ್ರೂಪ್ ವತಿಯಿಂದ ಶ್ರೀಪಾದರನ್ನು ಗೌರವಿಸಲಾಯಿತು.

ಉಡುಪಿ ಬ್ರ್ಯಾಂಡ್ ನ ತಿಂಡಿ- ತಿನಿಸುಗಳನ್ನು ಇನ್ನಷ್ಟು ಪ್ರಚಲಿಗೊಳಿಸುವ ಉದ್ದೇಶ:

ವಿ21 ಗ್ರೂಪ್ನ ಉಡುಪಿಯ ಮೊದಲ ಮಳಿಗೆಯಲ್ಲಿ ಉಡುಪಿಯ ಸಾಂಪ್ರದಾಯಿಕ ವಿಶೇಷ ತಿಂಡಿ ತಿನಿಸುಗಳು, ಹಲವು ಬಗೆಯ ಉಪ್ಪಿನಕಾಯಿ, ಚಟ್ನಿ ಪುಡಿ, ಹಪ್ಪಳಗಳು, ಸ್ಕ್ವಾಷ್ ಮತ್ತು ಸಿರಪ್ಗಳು, ಎಲ್ಲ ತರಹದ ಬೇಕರಿ ಉತ್ಪನ್ನಗಳು, ದಿನಸಿ ಸಾಮಗ್ರಿಗಳು ಹಾಗೂ ಉಡುಪಿಯ ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಹಲವು ಬಗೆಯ ಆಲಂಕಾರಿಕ ವಸ್ತುಗಳು ಲಭ್ಯವಿವೆ. ಜಿಲ್ಲೆಯಲ್ಲಿ ಈಗಾಗಲೇ ಸಾಂಪ್ರದಾಯಿಕ ತಿಂಡಿ-ತಿನಿಸುಗಳು ಮತ್ತು ಕರಕುಶಲ ವಸ್ತುಗಳ ತಯಾರಿಯಲ್ಲಿ ಪ್ರಾವೀಣ್ಯಗಳಿಸಿರುವ ವಿ21 ಗ್ರೂಪ್ ಉಡುಪಿಯ ಬ್ರ್ಯಾಂಡ್ ನ ತಿಂಡಿ- ತಿನಿಸುಗಳನ್ನು ಇನ್ನಷ್ಟು ಪ್ರಚಲಿಗೊಳಿಸುವ ಉದ್ದೇಶ ಹೊಂದಲಾಗಿದೆ.

ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಕೆ. ರಾಜೇಶ್ ಶೆಟ್ಟಿ ನಗರಸಭೆ ಪೌರಾಯುಕ್ತ ರಾಯಪ್ಪ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಡಿಟಿಓ ಕಮಲ್ ಕುಮಾರ್, ಬೇಕರಿ ಅಸೋಸಿಯೇಷನ್ ಅಧ್ಯಕ್ಷ ವಿಶ್ವನಾಥ ಕುಲಾಲ್, ನಿರ್ದೇಶಕರಾದ ರಾಘವೇಂದ್ರ ಮಾಡಿಕುಳ, ಡಾಲ್ಫಿ ವಿಕ್ಟರ್ ಲೂವಿಸ್ ಹಾಗೂ ನಿರ್ದೇಶಕರು, ಗಣ್ಯರು ಉಪಸಿತರಿದ್ದರು.

ನಿರ್ದೇಶಕ ಶ್ರೀಧರ್ ಪಿ.ಎಸ್. ಪ್ರಸ್ತಾವನೆಗೈದು, 21 ಮಂದಿ ಪಾಲುದಾರರನ್ನು ಹೊಂದಿದ ಸಂಸ್ಥೆಗೆ ‘ವಿ21 ಗ್ರೂಪ್’ ಎಂದು ಹೆಸರಿಲಾಗಿದ್ದು, ಇದರಲ್ಲಿ 20 ಮಂದಿ ಸಮಾನ ಮನಸ್ಕರು ಒಟ್ಟಾಗಿ ಒಂದು ಪಾಲನ್ನು (21ನೇ) ದೇವರ ಹೆಸರಿನಲ್ಲಿ ಇಡಲಾಗುವುದು. ಬಂದ ಲಾಭದ 21ನೇ ಪಾಲಿನಲ್ಲಿ ಸಮಾಜಮುಖಿ ಕಾರ್ಯ ನಡೆಸುವ ಉದ್ದೇಶ ಹೊಂದಲಾಗಿದೆ ಎಂದರು.

ನಿರ್ದೇಶಕ ದಿವಾಕರ ಸನಿಲ್ ಸ್ವಾಗತಿಸಿದರು. ದಯಾನಂದ ಉಗ್ಗೇಲ್ ಬೆಟ್ಟು ನಿರೂಪಿಸಿ, ವಂದಿಸಿದರು.