ಉಡುಪಿ: ಫೆ.22ರಿಂದ 26ರ ವರೆಗೆ ದಾದ್ವಶ ಜ್ಯೋರ್ತಿಲಿಂಗಗಳ ದರ್ಶನ ಹಾಗೂ ಆಧ್ಯಾತ್ಮಿಕ ರಾಜಯೋಗ ಚಿತ್ರ ಪ್ರದರ್ಶನ ಕಾರ್ಯಕ್ರಮ

ಉಡುಪಿ: ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಉಡುಪಿ ಶಾಖೆ ವತಿಯಿಂದ ಶಿವರಾತ್ರಿ ಉತ್ಸವ ಅಂಗವಾಗಿ ಫೆ.22ರಿಂದ 26 ರವರೆಗೆ ಜ್ಯೋರ್ತಿಲಿಂಗಗಳ ದರ್ಶನ ಹಾಗೂ ಆಧ್ಯಾತ್ಮಿಕ ರಾಜಯೋಗ ಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಆಯೋಜಿಸಲಾಗಿದೆ.

ಈ ಬಗ್ಗೆ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಸಂಸ್ಥೆಯ ಪ್ರತಿನಿಧಿ ರಘುರಾಮ್ ಮಾತನಾಡಿ, ಫೆ.22 ರಂದು ಸಂಜೆ 5.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದರು.

ಫೆ.26ರ ಬೆಳಿಗ್ಗೆ 7 ಗಂಟೆಗೆ ಸಂಸ್ಥೆಯ ಉಡುಪಿ ಶಾಖೆಯಲ್ಲಿ 89ನೇ ತ್ರಿಮೂರ್ತಿ ಶಿವ ಜಯಂತಿ ಪ್ರಯುಕ್ತ ಶಿವಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಅತಿಥಿಯಾಗಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ ಭಾಗವಹಿಸಲಿದ್ದಾರೆ.

ಫೆ.28 ರಂದು ಸಂಜೆ 5.30 ಕ್ಕೆ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿಯ ವೇದಿಕೆಯಲ್ಲಿ 89ನೇ ತ್ರಿಮೂರ್ತಿ ಶಿವ ಲಜಯಂತಿ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಡಿಡಿಪಿಐ ಗಣಪತಿ ಕೆ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರತಿದಿನ ಸಂಜೆ 6 ರಿಂದ 7 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕುಮಾರಿಗಳಾದ ಸುಮಾ, ಭಾಸ್ಕರ್ ಶೆಟ್ಟಿ ಅಂಬಲಪಾಡಿ, ಮಾಲಿನಿ, ಚಂದ್ರ ಅಮೀನ್ ಗುಂಡಿಬೈಲು ಉಪಸ್ಥಿತರಿದ್ದರು.