ಉಡುಪಿ: ಫೆ.1ರಿಂದ 2ರ ವರೆಗೆ “ರಂಗಭೂಮಿ ರಂಗೋತ್ಸವ”.

ಉಡುಪಿ: ರಂಗಭೂಮಿ ಉಡುಪಿ ಇದರ ಆಶ್ರಯದಲ್ಲಿ “ರಂಗಭೂಮಿ ರಂಗೋತ್ಸವ”, “ರಂಗಭೂಮಿ ಪ್ರಶಸ್ತಿ -2025” ಪ್ರದಾನ ಹಾಗೂ 45ನೇ ರಾಜ್ಯಮಟ್ಟದ ಕನ್ನಡ ನಾಟಕೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಫೆ.1, 2 ಮತ್ತು 3ರಂದು ನಗರದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ತಿಳಿಸಿದರು.


ಈ ಕುರಿತು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಫೆ.1ರಂದು ಸಂಜೆ 5.45ಕ್ಕೆ ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ರಂಗೋತ್ಸವವನ್ನು‌ ಉದ್ಘಾಟಿಸಲಿದ್ದಾರೆ. ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ನಾಟಕ ಸ್ಪರ್ಧೆಯ ಪ್ರಥಮ ಪ್ರಶಸ್ತಿ ವಿಜೇತ “ಬೆಂಗಳೂರಿನ ‘ರಂಗರಥ ಟ್ರಸ್ಟ್’ ತಂಡದಿಂದ “ಧರ್ಮನಟಿ” ನಾಟಕ ಮರುಪ್ರದರ್ಶನವಿದೆ ಎಂದರು.
ಎರಡನೇ ದಿನ ಫೆ. 2ರಂದು ಸಂಜೆ 6ಗಂಟೆಗೆ ನಾಟಕ ರಂಗದ ಹಿರಿಯ ಕಲಾವಿದ ಡಾ. ಭಾಸ್ಕರಾನಂದ ಕುಮಾರ್‌ ಅವರಿಗೆ “ರಂಗಭೂಮಿ ಪ್ರಶಸ್ತಿ 2025” ಪ್ರದಾನ ಮಾಡಲಾಗುವುದು. ಬಳಿಕ ರಂಗರಥ ಟ್ರಸ್ಟ್‌ ತಂಡದಿಂದ “ಇದ್ದಾಗ ನಮ್ದು ಕದ್ದಾಗ ನಿಮ್ಮು” ಎಂಬ ಸಾಂಸಾರಿಕ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಮೂರನೇ ದಿನ ಫೆ.3 ರಂದು ಸಂಜೆ 4.30ರಿಂದ ಕೇರಳ ಜಾನಪದ ಉತ್ಸವ ನಡೆಯಲಿದೆ. ಸಂಜೆ 6ಗಂಟೆಗೆ ಹಿರಿಯ ಜಾನಪದ ವಿದ್ವಾಂಸ ಡಾ. ವೈ.ಎನ್. ಶೆಟ್ಟಿ ಅವರಿಗೆ ಜಾನಪದ ಪ್ರಶಸ್ತಿ 2025 ಪ್ರದಾನ ಮಾಡಲಾಗುವುದು ಎಂದು‌ ಮಾಹಿತಿ ನೀಡಿದರು.


ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ್ ರಾವ್ ಕಿದಿಯೂರು, ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ನ ಅಧ್ಯಕ್ಷ ಸುಗುಣ ಕುಮಾರ್, ಕಾರ್ಯದರ್ಶಿ ಬಿನೇಶ್ ವಿ.ಸಿ, ಕರ್ನಾಟಕ ಜಾನಪದ ಪರಿಷತ್ ಕಾರ್ಯದರ್ಶಿ ರವಿರಾಜ್ ನಾಯಕ್ ಉಪಸ್ಥಿತರಿದ್ದರು.