ಉಡುಪಿ: ಪೌರಕಾರ್ಮಿಕರಿಗೆ ರೈನ್‌ಕೋಟ್, ಕೊಡೆ ವಿತರಣೆ

ಉಡುಪಿ, ಮೇ 27: ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆ, ನಗರಸಭಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಟಿ, ಮಣಿಪಾಲ ಹಾಗೂ ಮಲ್ಪೆ ವಿಭಾಗದ ಪೌರ ಕಾರ್ಮಿಕರಿಗೆ ರೈನ್ ಕೋಟ್ ಮತ್ತು ಕೊಡೆಯನ್ನು ನಗರಸಭಾ ಪೌರಾಯುಕ್ತ ರಾಯಪ್ಪ ಅವರು ಇತ್ತೀಚೆಗೆ ತಮ್ಮ ಕಚೇರಿಯಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಪೌರಕಾರ್ಮಿಕರು ತಮಗೆ ನೀಡಿದ ಗ್ಲೌಸ್, ಗಮ್ ಬೂಟ್ ಸೇರಿದಂತೆ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಿ ಕೆಲಸ ನಿರ್ವಹಿಸಬೇಕು.

ಮಳೆಗಾಲದಲ್ಲಿ ಮಲೇರಿಯಾ, ಡೆಂಗ್ಯೂ ಮೊದಲಾದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿರುವ ಕಾರಣ ಅಲ್ಲಲ್ಲಿ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು. ಉಡುಪಿ ನಗರವನ್ನು ಸ್ಚಚ್ಛವಾಗಿರಿಸುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಪರಿಸರ ಅಭಿಯಂತರ ಸ್ನೇಹ ಕೆಎಸ್, ಪ್ರಭಾರ ಆರೋಗ್ಯ ನಿರೀಕ್ಷಕರಾದ ಮಹೋಹರ್ ಹಾಗೂ ಸುರೇಂದ್ರ ಹೋಬಳಿದಾರ್, ಸಿಟಿ, ಮಣಿಪಾಲ, ಮಲ್ಪೆ ವಿಭಾಗದ ಸೂಪರ್ ವೈಸರ್‌ಗಳು ಹಾಗೂ ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.