ಉಡುಪಿ: ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವ ಕಾರ್ಯಕ್ರಮವನ್ನು ಉಡುಪಿ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಆಂಧ್ರಪ್ರದೇಶದ ರಾಜ್ಯಪಾಲ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಸ್.ಅಬ್ದುಲ್ ನಝೀರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು,”ನಮ್ಮ ದೇಶದ ನ್ಯಾಯಾಲಯಗಳಲ್ಲಿ ಐದು ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. ಒಂದೊಂದು ಪ್ರಕರಣವು ಸುಮಾರು ಹತ್ತು ಜನರನ್ನೊಳಗೊಂಡಿದ್ದು ಕನಿಷ್ಠ 25 ಕೋಟಿ ಜನರ ಮೇಲೆ ಪರಿಣಾಮ ಬೀರುತ್ತದೆ. ಇದು ತುಂಬಾ ಗಂಭೀರ ಸಮಸ್ಯೆ. ನಮ್ಮ ರಾಜ್ಯದ ಹೈಕೋರ್ಟ್ ನಲ್ಲೇ 3 ಲಕ್ಷ ಪ್ರಕರಣಗಳು ಬಾಕಿ ಉಳಿದಿದ್ದು ಕನಿಷ್ಠ ಹತ್ತು ಲಕ್ಷ ಜನರ ಮೇಲೆ ಪರಿಣಾಮ ಬೀರುತ್ತದೆ.
ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಸರಕಾರ, ಕಾರ್ಯಾಂಗ ಮತ್ತು ನ್ಯಾಯಾಂಗ ಸೇರಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ಕಾರ್ಯಕ್ರಮ ಆಚರಿಸುತ್ತಿರುವ ವಕೀಲರ ಸಂಘಕ್ಕೆ ಶುಭ ಹಾರೈಸಿ, ಮತ್ತಷ್ಟು ಯಶಸ್ಸು ಸಿಗುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಅರವಿಂದ್ ಕುಮಾರ್, ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಎನ್.ವಿ ಅಂಜಾರಿಯಾ, ಹೈಕೋರ್ಟ್ ನ್ಯಾಯಾಧೀಶರಾದ ಇ.ಎಸ್ ಇಂದ್ರೇಶ್, ರಾಜ್ಯ ಕಾನೂನು ಸಚಿವರಾದ ಎಚ್.ಕೆ ಪಾಟೀಲ್ , ಮಣಿಪಾಲ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಎಚ್.ಎಸ್ ಬಲ್ಲಾಳ್ ಮಾತನಾಡಿ ಶುಭ ಹಾರೈಸಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀಮತಿ ಎಂ.ಜಿ. ಉಮಾ, ಶ್ರೀ ರಾಮಚಂದ್ರ ಡಿ. ಹುದ್ದಾರ್, ಶ್ರೀ ಟಿ. ವೆಂಕಟೇಶ್ ನಾಯ್ಕ ಗೌರವ ಅತಿಥಿಗಳಾಗಿ, ಕರ್ನಾಟಕ ಸರ್ಕಾರದ ಅಡ್ವಕೇಟ್ ಜನರಲ್ ಶ್ರೀ ಶಶಿಕಿರಣ್ ಶೆಟ್ಟಿ,
ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಶ್ರೀ ಕೆ. ಎಸ್. ಭರತ್ ಕುಮಾರ್ ಮತ್ತು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀ ಕಿರಣ್ ಎಸ್. ಗಂಗಣ್ಣವರ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ಬಾರ್ ಕೌನ್ಸಿಲ್ ಉಡುಪಿ ಇದರ ಅಧ್ಯಕ್ಷರಾದ ರೋನಾಲ್ಡ್ ಪ್ರವೀಣ ಪ್ರಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಂಟೆ 10 ಗಂಟೆಗೆ ಜೋಡುಕಟ್ಟೆ ಜಂಕ್ಷನ್ನಿಂದ ಮೆರವಣಿಗೆ ಆಯೋಜಿಸಲಾಗಿತ್ತು. ಇದರಲ್ಲಿ ಅತಿಥಿ ಗಣ್ಯರು ಸೇರಿದಂತೆ ವಕೀಲರು, ಸಾರ್ವಜನಿಕರು, ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಲಾ ತಂಡಗಳು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದ್ದವು.
ಇದೀಗ ವಿವಿಧ ವಿಷಯಗಳ ಬಗ್ಗೆ ವಿಶೇಷ ವಿಚಾರಗೋಷ್ಠಿ ನಡೆಯಲಿದೆ. ಉಡುಪಿ, ಕುಂದಾಪುರ, ಕಾರ್ಕಳ ವಕೀಲರ ಸಂಘದ ಸದಸ್ಯರಿಂದ ಹಾಗೂ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಉಡುಪಿಯ “ಕಲಾಮಯಂ’ ತಂಡದಿಂದ ಜಾನಪದ ನೃತ್ಯ ವೈಭವ ನಡೆಯಲಿದೆ.