ಉಡುಪಿ: ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಆಗುತ್ತಿದ್ದು, ಉಡುಪಿ ನಗರದ ಬಹುತೇಕ ರಸ್ತೆಗಳಲ್ಲಿ ಹೊಂಡಗುಂಡಿಗಳು ಬಿದ್ದಿವೆ. ಕಳೆದ ಒಂದು ವಾರದ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟವಾಗಿದೆ.ಅಂಬಾಗಿಲು ಮಣಿಪಾಲ ರಸ್ತೆಯ ಶೀಂಬ್ರಾ ದೇವಸ್ಥಾನಕ್ಕೆ ಹೋಗುವ ಜಂಕ್ಷನ್ ನಲ್ಲಿ ಇತ್ತೀಚೆಗಷ್ಟೇ ರಸ್ತೆ ಡಾಮರೀಕರಣಗೊಂಡಿತ್ತು. ಮೊದಲ ಮಳೆಗಾಲಕ್ಕೇ ಇಲ್ಲಿ ದೊಡ್ಡ ಹೊಂಡ ಬಿದ್ದಿದೆ. ಮಳೆಗೆ ಈ ಹೊಂಡದಲ್ಲಿ ನೀರು ತುಂಬಿರುವುದರಿಂದ ಸವಾರರಿಗೆ ಈ ರಸ್ತೆಯಲ್ಲಿ ಸಂಚರಿಸುವುದೇ ಸವಾಲಾಗಿದೆ. ಮೂರು ಕಡೆಯಿಂದ ಈ ಜಂಕ್ಷನ್ ಮೂಲಕ ವಾಹನಗಳು ಸಾಗಬೇಕಾದರೆ ಸಾಕಷ್ಟು ಪರದಾಡಬೇಕಾಗುತ್ತದೆ.
ಇನ್ನು ನಗರದ ಬ್ರಹ್ಮಗಿರಿ ಬಿಗ್ ಬಜಾರ್ ರಸ್ತೆಯೂ ಹಾಳಾಗಿದೆ. ಭಾರಿ ಮಳೆಯಿಂದಾಗಿ ನಗರದ ತಗುಪ್ರದೇಶಗಳಲ್ಲಿ ನೀರು ನಿಂತ ಪರಿಣಾಮ ಹಲವು ಕಡೆ ಡ್ರೈನೇಜ್ ಗಳಿಂದ ನೀರು ಹೊರಹೊಮ್ಮುತ್ತಿದೆ. ಗುಂಡಿಬೈಲಿನಲ್ಲಿ ಹಲವು ಕಡೆ ಚರಂಡಿ ನೀರು ಕಾರಂಜಿಯಂತೆ ರಸ್ತೆಯ ಮೇಲೆ ಚಿಮ್ಮುತ್ತಿದ್ದು ಸವಾರರು ಮತ್ತು ಪಾದಚಾರಿಗಳು ಮೂಗಿನ ಮೇಲೆ ಕೈ ಇಟ್ಟು ಸಂಚರಿಸಬೇಕಾಗಿದೆ. ಚರಂಡಿ ನೀರು ರಸ್ತೆಯ ಮೂಲಕ ಹರಿದು ಅಕ್ಕಪಕ್ಕದ ಅಂಗಡಿ ಮುಂಗಟ್ಟು ಹೊಟೇಲು ಮತ್ತು ಮನೆಗಳತ್ತ ಹೋಗುತ್ತಿದ್ದರೂ ನಗರ ಸಭೆ ಈತನಕ ಇದಕ್ಕೊಂದು ಪರಿಹಾರ ಕಲ್ಪಿಸಿಲ್ಲ. ಸಂಬಂಧಪಟ್ಟವರು ಇನ್ನಾದರೂ ಇತ್ತ ಕಡೆ ಗಮನಹರಿಸಬೇಕಿದೆ.