ಉಡುಪಿ: ಉಡುಪಿ ಜಿಲ್ಲಾಡಳಿತ ರೂಪಿಸಿರುವ ಕಠಿಣ ನಿಯಮಾವಳಿಗಳಿಂದ ತುಳುನಾಡಿನ ಧಾರ್ಮಿಕ ಆಚರಣೆ ಹಾಗೂ ಸಂಸ್ಕೃತಿಯ ಭಾಗವಾಗಿರುವ ಕಂಬಳ, ಕೋಳಿ ಅಂಕ, ಯಕ್ಷಗಾನ, ನೇಮೋತ್ಸವ, ನಾಗ ಮಂಡಲ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ದೈವಾರಾಧನೆಯ ಚೌಕಟ್ಟಿನಲ್ಲಿ ದೈವಗಳಿಗೆ ರಕ್ತಹಾರದ ಕಲ್ಪನೆಯಲ್ಲಿ ಹಲವು ದೈವಸ್ಥಾನ, ಮಂದಿರಗಳಲ್ಲಿ ಹಲವಾರು ದಶಕಗಳಿಂದ ಕೋಳಿ ಪಡೆ ಆಯೋಜಿಸುವ ಪದ್ಧತಿ ಇದೆ ಹಾಗೂ ಜಿಲ್ಲೆಯಾದ್ಯಂತ ಯಕ್ಷಗಾನ, ನೇಮೋತ್ಸವ ಕಾರ್ಯಕ್ರಮಗಳು ಈ ಹಿಂದಿನಿಂದಲೂ ನಿರಂತರವಾಗಿ ನಡೆಯುತ್ತಿದ್ದು ಈ ಬಗ್ಗೆ ಜಿಲ್ಲಾಡಳಿತ ತುಳುನಾಡಿನ ಸಾಂಸ್ಕೃತಿಕ ಹಿನ್ನೆಲೆ, ಧಾರ್ಮಿಕ ನಂಬಿಕೆಗಳಿಗೆ ಪೂರಕವಾಗಿ ಅವಕಾಶ ನೀಡಿ ಸಹಕರಿಸಬೇಕು.
ಮುಂದಿನ ದಿನಗಳಲ್ಲಿ ಧಾರ್ಮಿಕ ಆಚರಣೆಗೆ ಜಿಲ್ಲಾಡಳಿತ
ಸಹಕಾರ ನೀಡದಿದ್ದಲ್ಲಿ ಜಿಲ್ಲೆಯ ಸಮಸ್ತ ಭಕ್ತರು, ದೇವಸ್ಥಾನದ ಪ್ರಮುಖರು, ಸಾರ್ವಜನಿಕರು ಪಕ್ಷಾತೀತವಾಗಿ ತುಳುನಾಡಿನ ಆಚರಣೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ಹರಿಮಕ್ಕಿ ರತ್ನಾಕರ ಶೆಟ್ಟಿ, ಸುರೇಶ್ ನಾಯಕ್ ಕುಯಿಲಾಡಿ, ದಿನಕರ ಬಾಬು, ಕಿರಣ್ ಕುಮಾರ್ ಬೈಲೂರು, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ದಿನೇಶ್ ಅಮೀನ್, ರಾಜೀವ್ ಕುಲಾಲ್, ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.












