ಉಡುಪಿ: ಡಿ.21ರಿಂದ 28ರವರೆಗೆ ಮಕ್ಕಳ ನಾಟಕೋತ್ಸವ

ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆಯ ವತಿಯಿಂದ ಎಂಜಿಎಂ ಕಾಲೇಜಿನ‌ ನೂತನ ರವೀಂದ್ರ ಮಂಟಪದಲ್ಲಿ ಇದೇ ಡಿ.21ರಿಂದ 28ರವರೆಗೆ ಆಯೋಜಿಸಿರುವ ಮಕ್ಕಳ ನಾಟಕೋತ್ಸವದಲ್ಲಿ ಆಯ್ದ 12 ಪ್ರೌಢಶಾಲೆಗಳ ವಿದ್ಯಾರ್ಥಿಗಳು 12 ನಾಟಕಗಳನ್ನು ಪ್ರದರ್ಶಿಸಲಿದ್ದಾರೆ ಎಂದು ರಂಗಭೂಮಿಯ‌ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಯುವಜನರು ಮತ್ತು ಮಕ್ಕಳಲ್ಲಿ ರಂಗಭೂಮಿಯ ಕುರಿತು ಅರಿವು ಮೂಡಿಸಿ, ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಉಡುಪಿಯ ಆಯ್ದ ಹನ್ನೆರಡು ಪ್ರೌಢಶಾಲೆಗಳಲ್ಲಿ “ರಂಗಭೂಮಿ ರಂಗಶಿಕ್ಷಣ” ಎಂಬ ರಂಗ ತರಬೇತಿ ಮತ್ತು ನಾಟಕ ನಿರ್ಮಾಣ‌ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.
ಡಿ.21ರಂದು ಬೆಳಿಗ್ಗೆ 9.45ಕ್ಕೆ ಶಾಸಕ ಯಶಪಾಲ್ ಸುವರ್ಣ ನಾಟಕೋತ್ಸವವನ್ನು‌ ಉದ್ಘಾಟಿಸಲಿದ್ದಾರೆ.

ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಾಜಿ ಶಾಸಕ ಕೆ. ರಘುಪತಿ ಭಟ್, ಕಲಾಪೋಷಕ ಅರುಣ್ ಕುಮಾರ್. ಉಡುಪಿಯ ಅದಿತಿ ಬಿಲ್ಡರ್ಸ್ ಮಾಲಕ ರಂಜನ್ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಡಿ.28ರಂದು ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.