ಉಡುಪಿ: ಜುಲೈ 27, 28ರಂದು ಮತ್ಸ್ಯರಾಜ್ ಕರ್ನಾಟಕ ಬ್ಯಾಂಡ್ಮಿಂಟನ್ ಲೀಗ್

ಉಡುಪಿ: ಮತ್ಸ್ಯರಾಜ್ ಗ್ರೂಪ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಮಲ್ಪೆ ಇದರ ವತಿಯಿಂದ ಎರಡು ದಿನಗಳ ಮತ್ಸ್ಯರಾಜ್ ಕರ್ನಾಟಕ ಬ್ಯಾಂಡ್ಮಿಂಟನ್ ಲೀಗ್ ಇದೇ ಜುಲೈ 27ಮತ್ತು 28ರಂದು ಉಡುಪಿ ಅಜ್ಜರಕಾಡಿನ ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬ್ಯಾಡ್ಮಿಂಟನ್ ಆಟಗಾರ ಪ್ರದೀಪ್ ಶೆಟ್ಟಿ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರಾವಳಿ ಕರ್ನಾಟಕದ ಆಟಗಾರರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪಂದ್ಯಾಟವನ್ನು ಆಯೋಜಿಸಲಾಗಿದೆ. ಈ ಪಂದ್ಯಾಟದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ರ್ಯಾಂಕಿಂಗ್ ಆಟಗಾರರು ಹಾಗೂ ಕರಾವಳಿ ಜಿಲ್ಲೆಗಳ ಬ್ಯಾಂಡ್ಮಿಂಟನ್ ಆಟಗಾರರು ಭಾಗವಹಿಸಲಿದ್ದಾರೆ ಎಂದರು.

ಪುರಷರ ಒಪನ್ ಡಬಲ್ಸ್, ಪುರುಷರ ಡಬಲ್ಸ್ 30+ ವಯೋಮಿತಿ, ಒಪನ್ ಮಿಕ್ಸಡ್ ಡಬಲ್ಸ್, ಪುರುಷರ ಡಬಲ್ಸ್ 40+ ವಯೋಮಿತಿ ಹಾಗೂ ಮಹಿಳೆಯರ ಡಬಲ್ಸ್ 40+ ವಯೋಮಿತಿ ಈ ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ. ಈಗಾಗಲೇ 300ಕ್ಕೂ ಅಧಿಕ ಮಂದಿ ಆಟಗಾರರು ನೋಂದಾಯಿಸಿಕೊಂಡಿದ್ದು, ಬಿಡ್ಡಿಂಗ್ ಮೂಲಕ 180 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಪಂದ್ಯಾಟದಲ್ಲಿ 10 ತಂಡಗಳಿದ್ದು, ಪ್ರತಿ ತಂಡದಲ್ಲಿ 18 ಆಟಗಾರರು ಇರಲಿದ್ದಾರೆ. ಪಂದ್ಯಾಟದಲ್ಲಿ ಗೆದ್ದವರಿಗೆ ಒಟ್ಟು 4 ಲಕ್ಷ ಮೌಲ್ಯದ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಜುಲೈ 27ರಂದು ಬೆಳಿಗ್ಗೆ 10ಗಂಟೆಗೆ ಪಂದ್ಯಾಟದ ಉದ್ಘಾಟನೆ ಹಾಗೂ ಜುಲೈ 28ರಂದು ಸಂಜೆ ಸಮಾರೋಪ ಸಮಾರಂಭ ನೆರವೇರಲಿದೆ. ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉದ್ಯಮಿ ಡಾ. ಜಿ ಶಂಕರ್, ಕಾಂಗ್ರೆಸ್ ಮುಖಂಡ ಮಿಥುನ್ ರೈ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮತ್ಸ್ಯರಾಜ್ ಗ್ರೂಪ್ ಸ್ಪೋರ್ಟ್ಸ್ ಆ್ಯಂಡ್ ಕಲ್ಬರಲ್ ಕ್ಲಬ್ ಅಧ್ಯಕ್ಷ ಕೇಶವ ಕೋಟ್ಯಾನ್, ಕಾರ್ಯದರ್ಶಿ ಅಭಿಜಿತ್ ಕೋಟ್ಯಾನ್, ಕೋಚ್ ಗಳಾದ ಪುನೀತ್, ಶಾಲಿನಿ ಶೆಟ್ಟಿ, ಕ್ರಿಕೆಟ್ ಆಟಗಾರ ರಾಹುಲ್ ಇದ್ದರು.