ಉಡುಪಿ ಜಿಲ್ಲೆಯಲ್ಲೂ ಪ್ಲಾಸ್ಟಿಕ್ ಫ್ಲೆಕ್ಸ್, ನಿಷೇಧಕ್ಕೆ ಹೆಚ್ಚಿತು ಒತ್ತಡ, ಕಾರ್ಕಳ, ಕುಂದಾಪುರದಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಗಳಿಗೆ ಲೆಕ್ಕವೇ ಇಲ್ಲ, ಪರಿಸರ ಸ್ನೇಹಿ ಬಟ್ಟೆ ಫ್ಲೆಕ್ಸ್ ಗಳಿಗೆ ಸಾರ್ವಜನಿಕರ ತಾಕೀತು

ಮಂಗಳೂರು ಮಹಾನಗರಪಾಲಿಕೆ ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ನಿಷೇಧಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬೆನ್ನಲ್ಲಿಯೇ ಉಡುಪಿ ಜಿಲ್ಲೆಯಲ್ಲೂ ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ನಿಷೇಧಿಸಬೇಕು ಎನ್ನುವ ಕೂಗು ಬಲವಾಗಿ ಎದ್ದಿದೆ. ಲೋಡುಗಟ್ಟಲೇ ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ವಿಲೇವಾರಿಮಾಡದೇ ಅಲ್ಲಲ್ಲಿ ಎಸೆಯುವ ದೃಶ್ಯಗಳು ಕಾರ್ಕಳ, ಉಡುಪಿ, ಕುಂದಾಪುರ ಭಾಗಗಳಲ್ಲಿ ಅತೀಯಾಗಿ ಕಂಡುಬಂದಿರುವ ಕುರಿತು ಸಾರ್ವಜನಿಕ ದೂರುಗಳು ದಾಖಲಾಗಿದೆ. ಅಲ್ಲದೇ ಈ ಪ್ಲಾಸ್ಟಿಕ್  ಫ್ಲೆಕ್ಸ್ ಗಳೆ ಮಣ್ಣನ್ನು ಸೇರಿ, ನೀರನ್ನು ಸೇರಿ ಪರಿಸರವನ್ನು ಹಾನಿಗೊಳಿಸುದಷ್ಟೇ ಅಲ್ಲದೇ ಬರೋಬ್ಬರಿ 400 ವರ್ಷ ಕರಗದೇ, ಅದರ ಹಾನಿಕಾರಕ ಅಂಶವನ್ನು ಮಾತ್ರ ನದಿ, ಪರಿಸರಕ್ಕೆ ಬಿಟ್ಟುಕೊಳ್ಳುವ ಕಾರಣದಿಂದ ಇಂತಹ ಬ್ಯಾನರ್ ಮತ್ತು ಫ್ಲೆಕ್ಸ್ ಗಳು ಅತ್ಯಂತ ಮಾರಣಾಂತಿಕ, ಭವಿಷ್ಯಕ್ಕೂ ಇದು ಅಪಾಯ ಎನ್ನುವುದನ್ನು ಸಂಶೋದಕರೂ ವಿವರಿಸಿದ್ದಾರೆ.

ಕಾರ್ಕಳ ಕುಂದಾಪುರದ ಬಹುತೇಕ ನದಿ, ಭೂಮಿಯನ್ನು ಪ್ಲಾಸ್ಟಿಕ್ ಫ್ಲೆಕ್ಸ್ ಗಳು ಮಲಿನಗೊಳಿಸಿವೆ, ಈಗಾಗಲೇ ಎಷ್ಟೋ ಜನರ ದೇಹದೊಳಗೆ ಇಂತಹ ಮಲಿನಗೊಂಡ ನೀರಿನ ಜೊತೆಗೆ ಪ್ಲಾಸ್ಲಿಕ್ ಹಾನಿಕಾರಕ ಅಂಶಗಳೂ ಸೇರಿಕೊಂಡಿವೆ. ಇದು ಹೀಗೇ ಮುಂದುವರಿದರೆ ಭವಿಷ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಆದರೆ ಈ ಕುರಿತು ಪುರಸಭೆ ಯಾವುದೇ ಕ್ರಮಕೈಗೊಳ್ಳದೇ ತೆಪ್ಪಗಿದೆ. ಫ್ಲೆಕ್ಸ್ ಬ್ಯಾನರ್ ತಯಾರಕರಿಗೂ ಯಾವುದೇ ಕಟ್ಟುನಿಟ್ಟಿನ ಸೂಚನೆಯನ್ನು ಪುರಸಭೆ ಕೊಡುತ್ತಿಲ್ಲ.

ಕರಾವಳಿಯಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಬ್ಯಾನರ್ ನಿಷೇದಿಸಬೇಕು ಎಂದು ಸರಕಾರದ ಆದೇಶವೇ ಇದೆ. ಆದ್ರೆ ಅದನ್ನು ಯಾರೂ ಪಾಲಿಸುತ್ತಿಲ್ಲ, ಕಾರ್ಕಳ, ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಂತೂ ಫ್ಲೆಕ್ಸ್ ತಯಾರಕರ ಲಾಬಿಗೆ ಜಿಲ್ಲಾಡಳಿತ ಪುರಸಭೆಗಳು ಮಣಿದಂತೆ ಕಾಣುತ್ತಿದೆ ಎನ್ನುವುದು ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ವಿರೋಧಿಸುತ್ತಿರುವ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಂತೆ ಉಡುಪಿಜಿಲ್ಲೆಯಲ್ಲೂ ಪ್ಲಾಸ್ಟಿಕ್ ಫ್ಲೆಕ್ಸ್ ಗಳ ವಿರುದ್ದ ಕ್ರಮ ಕೈಗೊಳ್ಳುವುದು ಸಂಪೂರ್ಣವಾಗಿ ನಿ‍ಷೇದಿಸುವ ಕುರಿತು ಗಟ್ಟಿ ಧ್ವನಿ ಕೇಳಿಬರುತ್ತಿರುವುದು ಪರಿಸರದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ