ಉಡುಪಿ: ಜಿಲ್ಲೆಯಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಶೀಘ್ರ ಅನುಷ್ಠಾನ; ಅಧಿಕಾರಿಗಳೊಂದಿಗೆ ಸಂಸದ ಕೋಟ ಚರ್ಚೆ

ಉಡುಪಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅನುಷ್ಠಾನವನ್ನು ಇನ್ನಷ್ಟು ಚುರುಕು ಗೊಳಿಸಲು ಹಾಗೂ ಫಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ನೀಡಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿ ಚರ್ಚಿಸಿದರು.

ಯೋಜನೆಯಲ್ಲಿ ಆಯ್ಕೆಯಾದ 6,732 ಫಲಾನುಭವಿಗಳ ಫೈಕಿ 4,864 ಮಂದಿ ತರಬೇತಿ ಪಡೆದಿದ್ದು, ಇನ್ನುಳಿದ ಅರ್ಜಿದಾರರಿಗೆ ತರಬೇತಿಯನ್ನು ಸಮರ್ಪಕವಾಗಿ ನೀಡಲು ಮತ್ತು ಪ್ರತಿಯೊಬ್ಬ ತರಬೇತಿ ಪಡೆದ ವ್ಯಕ್ತಿಗೆ ಸಾಲ ಸೌಲಭ್ಯ ಒದಗಿಸಲು ಸಂಸದ ಕೋಟ ಸೂಚನೆ ನೀಡಿದರು. ಟೈಲರಿಂಗ್, ಕ್ಷೌರಿಕರು, ಬುಟ್ಟಿ ತಯಾರಕರು, ಮರಗೆಲಸ ಮಾಡುವವರು, ಚಿನ್ನಬೆಳ್ಳಿ ಕೆಲಸಗಾರರು, ಮೇಸ್ತ್ರಿಗಳು, ಮಡಿಕೆ ತಯಾರಕರು, ಶಿಲ್ಪ ಕಲಾಕಾರರು ಮುಂತಾದ 18 ಸಾಂಪ್ರದಾಯಿಕ ಕುಲಕಸುಬುಗಳಿಗೆ ತರಬೇತಿ ನೀಡಿ ಮತ್ತು ಉತ್ತಮ ಗುಣಮಟ್ಟದ ಟೂಲ್ ಕಿಟ್‌ಗಳನ್ನು ಒದಗಿಸಿ, ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದವರು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಯೋಜನೆಯನ್ನು ಶೀಘ್ರವೇ ಅನುಷ್ಠಾನಕ್ಕೆ ಸಹಕರಿಸಬೇಕೆಂದು ಸಂಸದ ಕೋಟ ಸೂಚಿಸಿದರು. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ಹೆಚ್ಚು ಬೆಲೆಯ ಸ್ಟ್ಯಾಂಪ್ ಪೇಪರ್ ವಿರಹಿತ ಪಡಿಸಬೇಕೆಂದು ಸಂಸದರು ಸಲಹೆ ಇತ್ತರು.

ಸುದೀರ್ಘ ಚರ್ಚೆಯ ಬಳಿಕ ಮುಂದಿನ ತಿಂಗಳು ಜಿಲ್ಲಾ ಮಟ್ಟದ ವಿಶ್ವಕರ್ಮ ಫಲಾನುಭವಿಗಳ ಕಾರ್ಯಾಗಾರ ಮತ್ತು ಸಾಲ ಸೌಲಭ್ಯ ವಿತರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಕೋಟ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ರಾವ್, ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಹಾಗೂ ವಿಶ್ವಕರ್ಮ ಅನುಷ್ಠಾನ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಶ್ರೀನಿಧಿ ಹೆಗ್ಡೆ ಹಾಗೂ ಸುರೇಂದ್ರ ಪಣಿಯೂರು ಉಪಸ್ಥಿತರಿದ್ದರು.