ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ಮತದಾನ

ರಾಷ್ಟ್ರದ ಐಕ್ಯತೆಗಾಗಿ ಶಾಂತಿ ನೆಮ್ಮದಿಗಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು; ಕೋಟ
ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಕುಂದಾಪುರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ನ ಮತಗಟ್ಟೆ ಸಂಖ್ಯೆ 165ರಲ್ಲಿ ಮತದಾನ ಮಾಡಿದರು.
ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿದ ಅವರು, ಸರತಿ ಸಾಲಿನಲ್ಲಿ ನಿಂತು ಪತ್ನಿ ಶಾಂತ ಹಾಗೂ ಪುತ್ರಿ ಶೃತಿ ಅವರೊಂದಿಗೆ ಮತದಾನ ಮಾಡಿದರು.
ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೋಟ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಎಂಟು ವಿಧಾನಸಭಾ ಕ್ಷೇತ್ರದ ತಿರುಗಾಟ ಮಾಡಿದ್ದೇನೆ. ಕೋಟೆ ತಟ್ಟು ಗ್ರಾಮ ಪಂಚಾಯತ್ ನಲ್ಲಿ ಕುಟುಂಬ ಸಮೇತ ಬಂದು ಮತದಾನ ಮಾಡಿದ್ದೇನೆ ಎಂದರು.
ಇಡೀ ಲೋಕಸಭಾ ಕ್ಷೇತ್ರದಲ್ಲಿ ಜನ ಉತ್ಸಾಹದಲ್ಲಿ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಷ್ಟ್ರಕ್ಕಾಗಿ, ರಾಷ್ಟ್ರದ ಭದ್ರತೆಗಾಗಿ, ರಾಷ್ಟ್ರದ ಐಕ್ಯತೆಗಾಗಿ ರಾಷ್ಟ್ರದಲ್ಲಿ ಶಾಂತಿ ನೆಮ್ಮದಿಗಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಬಿಜೆಪಿ ಅಭ್ಯರ್ಥಿಯಾದ ನಾನು ಸಚಿವನಾಗಿ ಶಾಸಕನಾಗಿ ಮಾಡಿರುವ ಕೆಲಸವನ್ನು ಜನ ಗಮನಿಸಿದ್ದಾರೆ. ನಿಶ್ಚಿತವಾಗಿ ಜಯ ನನ್ನದಾಗುತ್ತೆ ಬಿಜೆಪಿ ಗೆಲ್ಲುತ್ತೆ. ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎನ್ನುವ ಆಶಯ ನಮ್ಮದು ಎಂದು ಹೇಳಿದರು.