ಉಡುಪಿ: ಕಡಗೋಲು ಕೃಷ್ಣನ ಉಡುಪಿಯಲ್ಲಿ ಮಕರ ಸಂಕ್ರಾಂತಿಯ ಮೂರು ತೇರಿನ ಉತ್ಸವ ಅತ್ಯಂತ ವೈಭವದಿಂದ ನೆರವೇರಿತು. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಭಕ್ತರ ಸಂಭ್ರಮ ಕಡಿಮೆಯಾದರೂ, ಉತ್ಸವದ ವೈಭವ ಮಾತ್ರ ಕುಂದಲಿಲ್ಲ. ಈ ಬಾರಿ ಸ್ಥಳೀಯ ಕೃಷ್ಣ ಭಕ್ತರು ಮಾತ್ರವಲ್ಲದೆ ವಿದೇಶದ ಅತಿಥಿಗಳು ಕೂಡ ಉತ್ಸವಕ್ಕೆ ಸಾಕ್ಷಿಯಾದರು.

ಹೌದು, ಕಡಕೋಲು ಹಿಡಿದು ನಿಂತ ಉಡುಪಿ ಕೃಷ್ಣನಿಗೆ ಮಕರ ಸಂಕ್ರಾಂತಿಯ ದಿನ ಪ್ರತಿಷ್ಠಾ ಉತ್ಸವದ ವಿಶೇಷ. ಮಕರ ಸಂಕ್ರಾಂತಿಯಂದೇ ಆಚಾರ್ಯ ಮಧ್ವರು, ಕೃಷ್ಣದೇವರನ್ನು ಪ್ರತಿಷ್ಠಾಪಿಸಿದರು. ಹಾಗಾಗಿ ಸಪ್ತೋತ್ಸವ ಸಹಿತ ಕೃಷ್ಣನಿಗೆ ಮೂರುತೇರಿನ ಉತ್ಸವ ಶತಮಾನಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಅತ್ಯಂತ ವೈಭವದಿಂದ ರಥೋತ್ಸವ ನಡೆಯಿತು. ಆದರೆ ಅಕಾಲಿಕವಾಗಿ ಮಳೆ ಸುರಿದ ಕಾರಣ, ಭಕ್ತರ ಸಂಭ್ರಮ ಮಾತ್ರ ಕಳೆಗುಂದಿತು. ಸರಿಯಾಗಿ ತೇರು ಹೊರಡುವ ವೇಳೆಯಲ್ಲಿ, ಗುಡುಗು ಸಿಡಿಲು ಸಹಿತ ತುಂತುರು ಮಳೆ ಆರಂಭವಾಯಿತು. ಆದರೆ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಮೂರುತೇರಿನ ಉತ್ಸವಕ್ಕೆ ಸಾಕ್ಷಿಯಾದರು. ಉಲ್ಲಾಸ ಉತ್ಸಾಹದಿಂದ ರಥ ಎಳೆದು ಖುಷಿ ಪಟ್ಟರು. ಹರೇ ಕೃಷ್ಣ ಗೋವಿಂದ ಎಂದು ಅತ್ಯುತ್ಸಾಹದಿಂದ ರಥ ಎಳೆದರು.

ಮಕರ ಸಂಕ್ರಾಂತಿಯ ಐದು ದಿನ ಮುಂಚಿತವಾಗಿ ಸಪ್ತೋತ್ಸವ ನಡೆಸಲಾಗುತ್ತೆ. 6ನೇ ದಿನ ಮೂರು ತೇರಿನ ಉತ್ಸವ ನಡೆದರೆ, ಏಳನೇ ದಿನಕ್ಕೆ ಚೂರ್ಣೋತ್ಸವ ನಡೆಯುವ ಸಂಪ್ರದಾಯ. ಮಕರ ಸಂಕ್ರಾಂತಿ ಉತ್ಸವದ ವೇಳೆ, ಬ್ರಹ್ಮರಥದಲ್ಲಿ ಕೃಷ್ಣದೇವರು ವಿರಾಜಮಾನರಾದರೆ, ಗರುಡ ಹಾಗೂ ಮಹಾಪೂಜಾ ರಥಗಳಲ್ಲಿ ಮುಖ್ಯಪ್ರಾಣ ಚಂದ್ರೇಶ್ವರ ಅನಂತೇಶ್ವರ ದೇವರ ವೈಭವದ ಮೆರವಣಿಗೆ ನಡೆಯುತ್ತದೆ. ತುಂತುರು ಮಳೆಯ ನಡುವೆಯೂ, ಪಟಾಕಿ ಸಿಡಿಸಿ ಸಂಭ್ರಮದಿಂದ ಕೃಷ್ಣದೇವರ ಮೆರವಣಿಗೆ ನಡೆಸಲಾಯಿತು. ಮೂರು ತೇರಿನ ಮಹೋತ್ಸವಕ್ಕೂ ಮುನ್ನ ಮಧ್ವ ಸರೋವರದಲ್ಲಿ ಕೃಷ್ಣ ಮುಖ್ಯಪ್ರಾಣರ ತೆಪ್ಪೋತ್ಸವ ಜರುಗಿತು. ಪರ್ಯಾಯ ಹೊತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು ಹಾಗೂ ವಿದೇಶಗಳಿಂದ ಆಗಮಿಸಿದ್ದ ಅವರ ಅಭಿಮಾನಿಗಳು ಉತ್ಸವದಲ್ಲಿ ಪಾಲ್ಗೊಂಡರು.

ಮಕರ ಸಂಕ್ರಾಂತಿಯ ಉತ್ಸವದ ದಿನ ಮಳೆ ಬರುವುದು ಅಪರೂಪ. ಈತಲೆಮಾರಿನ ಜನ ಹಿಂದೆಂದೂ ಕಂಡಿರದ ಈ ಅಪರೂಪದ ವಿದ್ಯಮಾನ, ಮಂಗಳಕರವಾಗಿರಲಿ ಎಂದು ಕೃಷ್ಣಭಕ್ತರು ಹಾರೈಸುತಿದ್ದಾರೆ.
