ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಉಡುಪಿಯ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿದರು.
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಗೌರವ ಆದರೊಂದಿಗೆ ಭಾಗವತ್ ಅವರನ್ನು ಬರಮಾಡಿಕೊಂಡರು. ಉಡುಪಿಯ ಶ್ರೀ ಕೃಷ್ಣ, ಮುಖ್ಯಪ್ರಾಣ ದೇವರನ್ನು ಕಂಡು ಪ್ರಾರ್ಥನೆ ಸಲ್ಲಿಸಿದ ಬಳಿಕ, ಗೀತಾ ಮಂದಿರದಲ್ಲಿ ಕಿರು ಸಮಾರಂಭ ಆಯೋಜಿಸಲಾಯಿತು.
ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಸನಾತನ ಧರ್ಮ ಸಂರಕ್ಷಣೆಯ ಕಾರ್ಯದಲ್ಲಿ ನೀಡಿದ ಮಹೋನ್ನತ ಸೇವೆಯನ್ನು ಪರಿಗಣಿಸಿ ‘ಹಿಂದು ಸಾಮ್ರಾಟ್’ ಎಂಬ ಬಿರುದು ಹಾಗೂ ‘ಶ್ರೀ ಕೃಷ್ಣ ಗೀತಾನುಗ್ರಹ ಪ್ರಶಸ್ತಿ’ಯನ್ನು ಭಾಗವತ್ ಅವರಿಗೆ ಪ್ರದಾನ ಮಾಡಿದರು.
ಪರ್ಯಾಯ ಮಠವು ಹಮ್ಮಿಕೊಂಡಿರುವ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ಮೋಹನ್ ಭಾಗವತ್ ಅವರಿಗೆ ವಿವರಣೆ ನೀಡಿದ ಶ್ರೀಗಳು ಧರ್ಮ ಹಾಗೂ ದೇಶದ ಆಗುಹೋಗುಗಳ ಬಗ್ಗೆ ಕೆಲಕಾಲ ವಿಚಾರ ವಿನಿಮಯ ನಡೆಸಿದರು. ಭಾಗವತ್ ಅವರ ಈ ಪೂರ್ವ ನಿರ್ಧರಿತ ಭೇಟಿಯ ಹಿನ್ನೆಲೆಯಲ್ಲಿ ಕೃಷ್ಣ ಮಠಕ್ಕೆ ವಿಶೇಷ ಭದ್ರತೆ ನೀಡಲಾಗಿತ್ತು. ಸುಮಾರು ಒಂದು ಗಂಟೆಗಳ ಕಾಲ ಭಾಗವತ್ ಶ್ರೀ ಕೃಷ್ಣ ಮಠದಲ್ಲಿ ಕಳೆದರು.