ಉಡುಪಿ: ಕಾಡಬೆಟ್ಟುವಿನ ಹುಲಿವೇಷದಾರಿ ಅಶೋಕ್ ರಾಜ್ ನಿಧನ

ಉಡುಪಿ: ಹುಲಿವೇಷದಾರಿ ಉಡುಪಿ ಕಾಡಬೆಟ್ಟುವಿನ ಅಶೋಕ್ ರಾಜ್ ಗುರುವಾರ‌ ಸಂಜೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಉಡುಪಿಯ ಕಾಡಬೆಟ್ಟುವಿನಲ್ಲಿ ಹುಲಿವೇಷ ತಂಡವನ್ನು ಕಟ್ಟಿ ಟೈಗರ್ ಕಿಂಗ್ ಎಂದೇ ಖ್ಯಾತಿ ಪಡೆದಿದ್ದರು. 2023 ಅಕ್ಟೋಬರ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಹುಲಿವೇಷ ಕಾರ್ಯಕ್ರಮ ನೀಡುತಿದ್ದ ಸಂಧರ್ಭದಲ್ಲಿ ಅಸ್ವಸ್ಥರಾಗಿದ್ದ ಅಶೋಕ್ ರಾಜ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆ ಬಳಿಕ ಉಡುಪಿ ಮತ್ತು ಮಣಿಪಾಲದ ಆಸ್ಪತ್ರೆಯ ಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು.

ಕಳೆದ 26 ವರ್ಷಗಳಿಂದ ಹುಲಿವೇಷ ಧರಿಸಿ ಅಷ್ಟಮಿ, ಮತ್ತು ಇನ್ನಿತರ ಸಂಧರ್ಭದಲ್ಲಿ ತಮ್ಮ ತಂಡದೊಂದಿಗೆ ಅವರು ಜನರಿಗೆ ಮನರಂಜಿಸುತಿದ್ದರು.

ಕಳೆದ 36 ವರುಷದಿಂದ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಉಡುಪಿಯಲ್ಲಿ ಸಾಂಪ್ರದಾಯಿಕ ಹುಲಿವೇಷ ಧರಿಸಿದ್ದ ಅವರು 28 ವರುಷ ಹುಲಿವೇಷ ತಂಡ ರಚಿಸಿ ಉಬಯ ಜಿಲ್ಲೆಗಳಲ್ಲಿ ತಂಡವವು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದು. ಇವರ ನಾಯಕತ್ವದಲ್ಲಿ ಉಡುಪಿಯಲ್ಲಿ ಹಲವಾರು ಹುಲಿವೇಷ ಧಾರಿಗಳಿಗೆ ತರಬೇತಿನೀಡಿದವರಾಗಿದ್ದು ಗುರುಸ್ಥಾನಹೊಂದಿದ್ದರು.

ಇಪ್ಪತ್ತೈದು ವರುಷ ಹಿಂದೆ ಅಂತರಾಷ್ಟ್ರೀಯ ಮಟ್ಟದ ಬಿ.ಬಿ.ಸಿ ವಾಹಿನಿಯ ತಂಡಕ್ಕೆ ಪ್ರೊಫೆಸರ್ ಎಸ್ ಎ. ಕೃಷ್ಣಯ್ಯರವರ ಮೂಲಕ ಉಡುಪಿಯಲ್ಲಿ ಹುಲಿಕುಣಿತದ ಚಿತ್ರಿಕರಣ ನಡೆದಾಗಲೂ ಅಶೋಕ್ ರಾಜ್ ಅವರ ತಂಡ ಆಯ್ಕೆಯಾಗಿತ್ತು.

ಅಶೋಕ್ ರಾಜ್ ಅವರ ನಿಧನದ ಕುರಿತು ಅವರ ಪುತ್ರಿ ಸುಷ್ಮಾ ರಾಜ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.