ಉಡುಪಿ: ಖಾಸಗಿ ಬಸ್ಸೊಂದರಲ್ಲಿ ಅಸ್ವಸ್ಥಗೊಂಡ ಯುವತಿಯೊಬ್ಬಳನ್ನು ಬಸ್ ಸಿಬ್ಬಂದಿ ಬಸ್ಸಿನಲ್ಲೇ ಆಸ್ಪತ್ರೆಗೆ ಕರೆದೊಯ್ದು ಸಕಾಲಿಕವಾಗಿ ಚಿಕಿತ್ಸೆಗೆ ನೆರವಾದ ಘಟನೆ ಉಡುಪಿಯಲ್ಲಿ ನಡೆದಿದೆ.
ಶಿರ್ವ – ಉಡುಪಿ ನಡುವೆ ಸಂಚರಿಸುವ ನವೀನ್ ಎಂಬ ಖಾಸಗಿ ಬಸ್ಸಿನಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಶಿರ್ವದಿಂದ ಉಡುಪಿಗೆ ಬರುತ್ತಿದ್ದ ಬಸ್ ಉಡುಪಿಯ ಹಳೆ ತಾಲೂಕು ಕಚೇರಿ ಬಳಿಕ ತಲುಪಿದಾಗ ಪ್ರಯಾಣಿಕ ಯುವತಿಯೊಬ್ಬಳು ಅಸ್ವಸ್ಥಗೊಂಡಿದ್ದಾಳೆ.
ಬಸ್ಸಿನಲ್ಲೇ ವಾಂತಿ ಮಾಡಿದ ಯುವತಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಳು. ವಿಷಯ ಅರಿವಿಗೆ ಬರುತ್ತಲೇ ಕಾರ್ಯಪ್ರವೃತ್ತರಾದ ಬಸ್ ಚಾಲಕ ಶಶಿಕಾಂತ್ ಮತ್ತು ನಿರ್ವಾಹಕ ಸಲೀಂ ತಕ್ಷಣ ಬಸ್ಸನ್ನು ಹತ್ತಿರದ ಡಾ. ಟಿಎಂಎ ಪೈ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ ಬಸ್ ಸಿಬ್ಬಂದಿ,ಯುವತಿಯ ಮನೆಯವರಿಗೆ ಮಾಹಿತಿ ನೀಡಿ ಅವರು ಬರುವ ತನಕ ಚಿಕಿತ್ಸೆಗೆ ಸಹಕಾರ ನೀಡಿದ್ದಾರೆ.
ಬಸ್ ಸಿಬ್ಬಂದಿ ಶಶಿಕಾಂತ್ ಮತ್ತು ಸಲೀಂ ಅವರ ಮಾನವೀಯ ಕಾಳಜಿಗೆ ಪ್ರಶಂಸೆ ವ್ಯಕ್ತವಾಗಿದೆ.