ಉಡುಪಿ: ಅಂತರಾಷ್ಟ್ರೀಯ ಜಾದು ಕಲಾವಿದ ಪ್ರೊಫೆಸರ್ ಶಂಕರ್ ಅವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಪ್ರೊ. ಶಂಕರ್ ಅಭಿನಂದನ ಸಮಿತಿ ಉಡುಪಿ ಆಯೋಜಿಸಿದ್ದು ಡಿಸೆಂಬರ್ 14ರಂದು ಶನಿವಾರ ಮಧ್ಯಾಹ್ನ 3:30 ರಿಂದ 8:30ರವರೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಹವಾನಿಯಂತ್ರಿತ ಸಭಾಂಗಣದಲ್ಲಿ ಕಾರ್ಯಕ್ರಮ ಜರಗಲಿದೆ.
ಮಧ್ಯಾಹ್ನ 3:30 ರಿಂದ ವಿದುಷಿ ಮಂಜರಿಚಂದ್ರ ಅವರ ಶಿಷ್ಯರಿಂದ ‘ನೃತ್ಯ ಸಿಂಚನ’ ಕಾರ್ಯಕ್ರಮ. 4:00 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮದರ್ಶಿ, ಡಾ. ಹರಿಕೃಷ್ಣ ಪುನರೂರು ಅವರು ಮಾಡಲಿದ್ದು ,ಸಭೆಯಲ್ಲಿ ಜಯಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬೈಯ ತೋನ್ಸೆ ಜಯಕೃಷ್ಣ ಶೆಟ್ಟಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿ, ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್ ಉಪಸ್ಥಿತರಿರುತ್ತಾರೆ.
4:35 ರಿಂದ ಪ್ರೊ. ಶಂಕರ್ ಅವರ ಜಾದೂ ಜಗತ್ತು ವಿಡಿಯೋ ತುಣುಕುಗಳು ಅನಾವರಣಗೊಳ್ಳಲಿದೆ. ಸಂಜೆ 5:00ಕ್ಕೆ ಪ್ರೊ. ಶಂಕರ್ ಅವರ ಕುರಿತಾದ ಪ. ರಾಮಕೃಷ್ಣ ಶಾಸ್ತ್ರಿ ಅವರು ರಚಿಸಿದ ಪುಸ್ತಕವನ್ನು ನಾಡೋಜ ಪ್ರೊ. ಕೆ. ಪಿ. ರಾವ್ ಅವರು ಲೋಕಾರ್ಪಣೆ ಗೊಳಿಸಲಿದ್ದಾರೆ. ಸಭೆಯಲ್ಲಿ ಯಕ್ಷಗಾನ ಅಕಾಡೆಮಿಯ ಪೂವಾ೯ಧ್ಯಕ್ಷರಾದ ಪ್ರೊ. ಎಂ. ಎಲ್. ಸಾಮಗ, ಪ್ರಕಾಶಕರಾದ ಪ್ರಕಾಶ್ ಕೊಡಂಕೇರಿ ಉಪಸ್ಥಿತರಿರುತ್ತಾರೆ.
ಸಂಜೆ 5:30 ರಿಂದ ಪ್ರೊ. ಶಂಕರ್ ಅವರ ಬಗ್ಗೆ ತೇಜಸ್ವಿ ಶಂಕರ್ ಅವರು ಮಾತನಾಡಲಿದ್ದಾರೆ. ಸಂಜೆ 5:45 ರಿಂದ ಪ್ರೊಫೆಸರ್ ಶಂಕರ್ ಅವರ ಒಡನಾಡಿಗಳಾದ ಡಾ. ಕಿರಣ್ ಆಚಾರ್ಯ, ಲಿಯಾಕತ್ ಅಲಿ, ಮೂರ್ತಿ ದೇರಾಜೆ, ರಾಜ ಯೋಗಿನಿ ಬಿ.ಕೆ. ಸೌರಭ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದು, ಆಸ್ಟ್ರೋ ಮೋಹನ್ ಅವರು ಸಮನ್ವಯಕಾರಾಗಿರುತ್ತಾರೆ.
6.20 ರಿಂದ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ವಿನಯ್ ಹೆಗಡೆಯವರಿಂದ ‘ಗಾಳಿಯಲ್ಲಿ ಚಿತ್ತಾರ’ ಎನ್ನುವ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಸಂಜೆ 7.10 ರಿಂದ ಪ್ರೊಫೆಸರ್ ಶಂಕರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಇದರ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.
ಖ್ಯಾತ ವಾಗ್ಮಿ ಹಾಗೂ ಇಂದ್ರಜಾಲ ಪ್ರವೀಣ ಓಂ ಗಣೇಶ್ ಉಪ್ಪುಂದ ಅವರು ಅಭಿನಂದನ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮನೋರೋಗ ತಜ್ಞ ಡಾ. ಪಿ .ವಿ ಭಂಡಾರಿ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ ಗಂಗಾಧರ್ ರಾವ್, ಸಾಫಲ್ಯ ಟ್ರಸ್ಟ್ ನಿರ್ದೇಶಕಿ ನಿರೂಪಮ ಪ್ರಸಾದ್ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದ ನಂತರ ಸಂಘ ಸಂಸ್ಥೆಗಳು ಹಾಗೂ ಅಭಿಮಾನಿಗಳು ಪ್ರೊ. ಶಂಕರ್ ಅವರನ್ನು ಗೌರವಿಸಲು ಅವಕಾಶವಿದೆ ಎಂದು ಪ್ರೊಫೆಸರ್ ಶಂಕರ್ ಅಭಿನಂದನ ಸಮಿತಿಯ ಅಧ್ಯಕ್ಷರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ. ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಕಾರ್ಯದರ್ಶಿ ಜನಾರ್ದನ ಕೊಡವೂರು, ಸಂಚಾಲಕ ರವಿರಾಜ್ ಹೆಚ್.ಪಿ ಉಪಾಧ್ಯಕ್ಷರಾದ ಕೋಶಾಧಿಕಾರಿ ಪ್ರೊ. ಸದಾಶಿವ ರಾವ್ ಉಪಸ್ಥಿತರಿದ್ದರು.