ಉಡುಪಿ:ಸಾಹಿತ್ಯದಲ್ಲಿ ವೈಚಾರಿಕ ಹಾಗೂ ವೈಜ್ಞಾನಿಕ ಪ್ರಜ್ಞೆ ಅತಿ ಮುಖ್ಯ: ಡಾ.ಗಣನಾಥ ಶೆಟ್ಟಿ ಎಕ್ಕಾರು

ಉಡುಪಿ: ಸಾಹಿತ್ಯದಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಪ್ರಜ್ಙೆಗಳ ಕೊರತೆ ಇದ್ದಲ್ಲಿ ಅದು ಸಮಾಜಕ್ಕೆ ಎಂದಿಗೂ ದಾರಿ ದೀಪವಾಗಲು ಸಾಧ್ಯವಿಲ್ಲ. ವೈಚಾರಿಕ ಹಾಗೂ ವೈಜ್ಞಾನಿಕ ಪ್ರಜ್ಙೆಯನ್ನು ಕಾರಂತರ ಕಾದಂಬರಿಗಳಲ್ಲಿ ಕಾಣಬಹುದಾಗಿದ್ದು, ಆ ನಿಟ್ಟಿನಲ್ಲಿ ಅವರ ಕಾದಂಬರಿಗಳ ಓದುವಿಕೆ ಅತಿ ಮುಖ್ಯ ಎಂದು ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.

ಅವರು ಗುರುವಾರ ನಗರದ ಕಡೆಕಾರಿನ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇವರಿಂದ ರಾಷ್ಟ್ರೀಯ ಸೇವಾ ಯೋಜನೆ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇವರ ಸಹಯೋಗದಲ್ಲಿ ನಡೆದ ಅರಿವಿನ ಬೆಳಕು ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕನ್ನಡ ಸಾಹಿತ್ಯ ಮಾತ್ರವಲ್ಲದೇ ಕನ್ನಡ ಸಂಸ್ಕೃತಿಯ ಕ್ಷೇತ್ರದಲ್ಲಿಯೂ ಸಹ ವಿಚಾರವಾದಕ್ಕೆ ಅತ್ಯಂತ ಮಹತ್ವ ನೀಡಿದವರು ಕಾರಂತರು, ಅವರ ಬರಹಗಳನ್ನು ಕೇಂದ್ರವಾಗಿಟ್ಟುಕೊಂಡು ಅನೇಕ ಕಾರ್ಯಕ್ರಮಗಳನ್ನು ಅಯೋಜಿಸಿ ಯುವ ಪೀಳಿಗೆಗೆ ಕಾರಂತರನ್ನು
ಪರಿಚಯಿಸುವುದರ ಜೊತೆಗೆ, ಸಮಕಾಲೀನ ಸಮಸ್ಯೆಗಳನ್ನು ಚರ್ಚಿಸುವುದು ಕೂಡ ಅತ್ಯಂತ ಮುಖ್ಯ ವಿಚಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಂಗ್ಲ ವಿಭಾಗದ ಮುಖ್ಯಸ್ಥ ಡಾ.ಪ್ರಸಾದ್ ರಾವ್, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಕಾರಂತರು ಬದುಕಿನ ಕೊನೆಯವರೆಗೂ ತಮ್ಮ ಬರವಣಿಗೆಯಲ್ಲಿ ಸಮಾಜದ ಬಗೆಗೆ ವಿಶೇಷ ಕಾಳಜಿ ಹೊಂದುವ ಮೂಲಕ ಸಾರ್ಥಕ ಬದುಕನ್ನು ಬದುಕಿದವರು. ಅವರ ಸಾಹಿತ್ಯ ವಿಚಾರಧಾರೆ ಬದುಕಿಗೆ ಅತಿ ಅಮೂಲ್ಯ ಎಂದರು.

ಶಿಬಿರಾಧಿಕಾರಿ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ನಿಕೇತನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ.ಡಿ, ಸ್ನಾತಕೋತ್ತರ ವಿಭಾಗದ ಸಂಯೋಜಕ ರವಿಪ್ರಸಾದ್
ಕೆ.ಜಿ, ಸಹ ಪ್ರಾಧ್ಯಾಪಕರಾದ ಸುಚಿತ್ರ ಟಿ, ಡಾ.ಜಯಮಂಗಳ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಜ್ಯೋತಿ ಸ್ವಾಗತಿಸಿ, ದಿವ್ಯ ನಿರೂಪಿಸಿ, ರೇಷ್ಮಾ ವಂದಿಸಿದರು.