ಉಡುಪಿಯ ಯುವ ಜನತೆಯ ಉದ್ಯೋಗ ಸೃಷ್ಟಿಗೆ ಐ ಟಿ ಪಾರ್ಕ್‌ ಪ್ರಥಮ ಆದ್ಯತೆ : ಯಶ್‌ಪಾಲ್‌

ಡುಪಿ : ವಿದ್ಯಾವಂತರ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಉಡುಪಿಯ ಯುವ ಜನತೆಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಸೃಷ್ಟಿಗೆ ಪ್ರಥಮ ಆದ್ಯತೆ ನೀಡುವುದಾಗಿ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ ಹೇಳಿದರು.
ಮಣಿಪಾಲ ಇಂಡಸ್ಟಿಯಲ್‌ ಏರಿಯಾದಲ್ಲಿ ವಿವಿಧ ಘಟಕಗಳಿಗೆ ಭೇಟಿ ನೀಡಿ ಸಿಬಂದಿಗಳಲ್ಲಿ ಮತ ಯಾಚನೆ ಮಾಡಿ ಮಾತನಾಡಿದರು.

ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಿಂದ ಉಡುಪಿಯಲ್ಲಿ ಐ ಟಿ ಪಾರ್ಕ್‌ ಸ್ಥಾಪನೆಗೆ ವಿಶೇಷ ಕಾರ್ಯ ಯೋಜನೆ ರೂಪಿಸಿದ್ದು ಈ ಮೂಲಕ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯ ಐ ಟಿ ಹಬ್‌ ಆಗಿ ರೂಪಿಸಲಿದ್ದೇವೆ ಎಂದರು.

ಶಿಕ್ಷಣ, ವೈದ್ಯಕೀಯ ಹಾಗೂ ಕೈಗಾರಿಕಾ ವಲಯ, ರಿಯಲ್‌ ಎಸ್ಟೇಟ್‌ ಮತ್ತು ಕರಾವಳಿಯ ಆರ್ಥಿಕತೆಯಲ್ಲಿ ಬಹು ದೊಡ್ಡ ಪಾತ್ರವಹಿಸುವ ಮೀನುಗಾರಿಕೆಯ ಅಭಿವೃದ್ಧಿಗಾಗಿ ಪ್ರತ್ಯೇಕ ಮೀನುಗಾರಿಕಾ ಕೈಗಾರಿಕಾ ವಲಯ ಸ್ಥಾಪಿಸಿ ಉದ್ಯೋಗಾವಕಾಶ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಾಣಕ್ಕೆ ಬದ್ದವಾಗಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 100 ಕ್ಕೂ ಮಿಕ್ಕಿ ಐಟಿ ಕ್ಷೇತ್ರದ ಸ್ಟಾರ್ಟ್‌ ಅಪ್‌ ಕಂಪೆನಿಗಳು ಕಾರ್ಯಾಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಜತೆ ಜತೆಗೆ ಪ್ರವಾಸೋದ್ಯಮದ ಮೂಲಕ ಸ್ವ ಉದ್ಯೋಗದ ಕಲ್ಪನೆಗೂ ಶಕ್ತಿ ತುಂಬಲು ಡಬಲ್‌ ಇಂಜಿನ್‌ ಸರ್ಕಾರದ ಮೂಲಕ ಯೋಜನೆ ರೂಪಿಸಲಾಗುವುದು ಎಂದರು.

ಶಾಸಕ ರಘುಪತಿ ಭಟ್‌ ಅವರು ಮಾತನಾಡಿ, ಉಡುಪಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ಗರಿಷ್ಠ ಮಟ್ಟದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ ಅವರನ್ನು ಗೆಲ್ಲಿಸುವ ಮೂಲಕ ಶಕ್ತಿ ತುಂಬಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯೆ ಕಲ್ಪನಾ ಸುಧಾಮ, ಉಡುಪಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿನೇಶ್‌ ಅಮೀನ್‌, ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಚಿನ್‌ ಪೂಜಾರಿ, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.