ಉಡುಪಿ: ಕಡಿಯಾಳಿಯ ಕೋಚಿಂಗ್ ಸೆಂಟರ್ ಗೆ ಹೋಗಿದ್ದ ವೇಳೆ ನಾಪತ್ತೆಯಾಗಿದ್ದ ಬಾಲಕನೋರ್ವ ಇಂದು ಬೆಳಿಗ್ಗೆ ಕೇರಳದ ಪಾಲ್ಘಾಟ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ.
ಬ್ರಹ್ಮಾವರ ಹಂದಾಡಿ ಬಾರಕೂರು ರಸ್ತೆಯ ನಿವಾಸಿ ಪ್ರಕಾಶ್ ಎಂಬವರ ಪುತ್ರ ಆರ್ಯ(13) ನಾಪತ್ತೆಯಾಗಿದ್ದ ಬಾಲಕ. ಎಂಟನೇ ತರಗತಿಯಲ್ಲಿ ಓದುತ್ತಿದ್ದ ಆರ್ಯ ಭಾನುವಾರ ಬೆಳಿಗ್ಗೆ ಉಡುಪಿ ಕಡಿಯಾಳಿಯಲ್ಲಿರುವ ಆಕಾಶ್ ಕೋಚಿಂಗ್ ಇನ್ ಸ್ಟಿಟ್ಯೂಟ್ ಗೆಂದು ಹೋಗಿದ್ದನು. ಆದರೆ, ಬಳಿಕ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದನು. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಆರ್ಯ, ಇಂದ್ರಾಳಿ ರೈಲು ನಿಲ್ದಾಣದಿಂದ ರೈಲಿನ ಮೂಲಕ ಕೇರಳದ ಕಡೆ ತೆರಳಿರುವುದು ಕಂಡುಬಂತು. ಅತ್ತ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಆರ್ಯನನ್ನು ಪಾಲ್ಘಾಟ್ ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ತಿಳಿದ ಉಡುಪಿ ಪೊಲೀಸರು ಪಾಲ್ಘಾಟ್ ಗೆ ತೆರಳಿದ್ದಾರೆಂದು ತಿಳಿದುಬಂದಿದೆ.