ಉಡುಪಿ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಇವರ ಸಹಯೋಗದಲ್ಲಿ ನಲ್ ಜಲ್ ಮಿತ್ರ ಬಹು ಕೌಶಲ್ಯ ತರಬೇತಿ ಕಾರ್ಯಕ್ರಮವು ಇಂದು ನಗರದ ಅಲೆವೂರು ಪ್ರಗತಿ ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ನ ಯೋಜನಾ ನಿರ್ದೇಶಕ ಶ್ರೀನಿವಾಸ್ ರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಳ್ಳಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.
ಈ ಜಲ ಜೀವನ್ ಮಿಷನ್ ಅಡಿಯಲ್ಲಿ ನಲ್ ಜಲ್ ಮಿತ್ರ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಪ್ರತಿ ಗ್ರಾಮ ಪಂಚಾಯತ್ ನಿಂದ ಎರಡು ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಈ ಸದ್ಯಸರಿಗೆ ಹದಿನೇಳು ದಿನದ ಬಹು ಕೌಶಲ್ಯ ತರಬೇತಿಯನ್ನು ನೀಡಿ ಗ್ರಾಮ ಪಂಚಾಯತ್ಗೆ ನಿಯೋಜನೆ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ವಿವಿಧ ತರಬೇತಿ ನೀಡಿ ಸ್ವ-ಉದ್ಯೋಗಕ್ಕೆ ಅವಕಾಶ ಕಲ್ಪಿಸುವುದರ ಮೂಲಕ ಗ್ರಾಮೀಣ ಮಹಿಳೆಯರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸಲಾಗುತ್ತಿದೆ ಎಂದ ಅವರು, ಜಲ್ ಜೀವನ್ ಮಿಷನ್ ನಡಿ ತರಬೇತಿ ಪಡೆದ ಮಹಿಳೆಯರನ್ನು ನಲ್ ಜಲ್ ಮಿತ್ರರನ್ನಾಗಿ ಗ್ರಾಮ ಪಂಚಾಯತ್ ನಲ್ಲಿ ನಿಯೋಜಿಸುವುದರ ಮೂಲಕ ಸಂಜೀವಿನಿ ಮಹಿಳೆಯರನ್ನು ಇನ್ನಷ್ಟು ಆರ್ಥಿಕವಾಗಿ ಸಬಲೀಕರಣಗೊಳಿಸುವ ಗುರಿ ಹೊಂದಾಗಿದೆ ಎಂದರು.
ಉಡುಪಿ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ವಿಜಯ ಮಾತನಾಡಿ, ಸಂಜೀವಿನಿ ಯೋಜನೆಯಡಿ ವಿನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಸ್ತುತ ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರು ವಿವಿಧ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂದು ನಲ್ ಜಲ್ ಮಿತ್ರ ಕಾರ್ಯಕ್ರಮದಡಿ ಸಂಜೀವಿನಿ ಗುಂಪಿನ ಮಹಿಳೆಯರಿಗೆ ಬಹು ಕೌಶಲ್ಯ ತರಬೇತಿ ನೀಡಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಲ್ ಜೀವನ್ ಮಿಷನ್ ನನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುವುದು ಎಂದರು.
ತರಬೇತಿ ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಫರ್ಝಾನ, ಜಲ್ ಜೀವನ್ ಮಿಷನ್ ಇದರ ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬ್ಬೆಲೋ, ನಲ್ ಜಲ್ ಮಿತ್ರ ತರಬೇತಿಯ ತರಬೇತಿದಾರರಾದ ಗಣಪತಿ ಭಟ್, ಜಿಲ್ಲಾ ಕೌಶಲ್ಯ ಮತ್ತು ಉದ್ಯಮಶೀಲತಾ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್ ಪಿ , ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ಮತ್ತು ಸಂಜೀವಿನಿ ಯೋಜನೆಯ ಹಾಗೂ ಕೌಶಲ್ಯ ಇಲಾಖೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.












