ಉಡುಪಿ: ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ/ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್ (FCI) ಮೈಸೂರು ಹಾಗೂ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (IHM) ಬೆಂಗಳೂರು ಇವರ ಮೂಲಕ ರಾಜ್ಯಾದ್ಯಂತ ಪರಿಶಿಷ್ಟ ಜಾತಿಗೆ ಸೇರಿದ 292 ಅಭ್ಯರ್ಥಿಗಳಿಗೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಗೆ ವಸತಿ ಸಹಿತ ಕಾರ್ಯಕ್ರಮವನ್ನು
ಜಾರಿಗೊಳಿಸಲು ಉದ್ದೇಶಿಸಲಾಗಿರುತ್ತದೆ.
ಮುಂದುವರೆದು ಮಲ್ಟಿ ಕ್ಯೂಸೈನ್ ಕುಕ್ ವಿಷಯದ ಎರಡನೇ ಹಂತದ ತರಬೇತಿಯು ಏಪ್ರಿಲ್ 15 ರಿಂದ ಪ್ರಾರಂಭವಾಗಲಿದ್ದು,
ತರಬೇತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಈ ಕೆಳಕಂಡ ವಿಷಯಗಳನ್ನು ಗಮನಹರಿಸಬೇಕು.ಈಗಾಗಲೇ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್‌ಗಳಲ್ಲಿ ಕೆಲಸ ಖಾತರಿಯಾಗಿರುವುದು.
ತರಬೇತಿ ಪಡೆಯುವ ವೇಳೆ ಮಾಸಿಕ 2,000 ರೂ. ಗಳ ಸ್ಟೈಫಂಡ್ ನೀಡಲಾಗುವುದು. ತರಬೇತಿಗೆ ಹಾಜರಾಗುವವರಿಗೆ ವಸತಿ, ಊಟೋಪಚಾರ ಹಾಗೂ ಯೂನಿಫಾರ್ಮ್ ನೀಡಲಾಗುವುದು. ತರಗತಿಯ ತರಬೇತಿ ಜೊತೆಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್ ಗಳಲ್ಲಿ ಆನ್ ಜಾಬ್ ಟ್ರೈನಿಂಗ್ ಸಹ ನೀಡಲಾಗುವುದು.
ಐ.ಹೆಚ್.ಎಂ ಬೆಂಗಳೂರು ಹಾಗೂ ಎಫ್.ಸಿ.ಐ ಮೈಸೂರು ಸಂಸ್ಥೆಗಳು ಪ್ರತಿಷ್ಟಿತ ಆತಿಥ್ಯ ಕ್ಷೇತ್ರದಲ್ಲಿ ತರಬೇತಿ ನೀಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿದ್ದು, ಈ ಸಂಸ್ಥೆಗಳಿಂದ ತರಬೇತಿ ನೀಡಿ ಸರ್ಟಿಫಿಕೇಟ್ ನೀಡುವುದರಿಂದ ರಾಜ್ಯದೊಳಗೆ ಅಲ್ಲದೇ ದೇಶದ ಯಾವುದೇ ಭಾಗದ
ಹೋಟೆಲ್ ಉದ್ಯಮದಲ್ಲಿ ಕೆಲಸ ಖಾತರಿಯಾಗುವುದು.
ಆದ್ದರಿಂದ ಮಲ್ಟಿ ಕ್ಯೂಸೈನ್ ಕುಕ್ ಹಾಗೂ ಫುಡ್ & ಬೆವರೇಜ್ ಸರ್ವೀಸ್ ಸ್ಟೆವಾರ್ಡ್ ತರಬೇತಿ ಪಡೆಯಲು ಆಸಕ್ತಿ ಇರುವ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡಕ್ಕೆ ಸೇರಿದ 20 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ ಏಪ್ರಿಲ್ 3 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ಮಣಿಪಾಲ, ಉಡುಪಿ ದೂ.ಸಂಖ್ಯೆ: 0820-2574868 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.












