ಉಡುಪಿ: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ)
ಅಧಿನಿಯಮ 2013 ರ ಅನ್ವಯ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳಗಳನ್ನು ತಡೆಯಲು, ಹತ್ತಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರದ ಕಾರಣದಿಂದಾಗಿ ಯಾವುದಾದರೂ ಇಲಾಖೆ, ಕಛೇರಿ ಅಥವಾ ಸಂಸ್ಥೆಯಲ್ಲಿ ಆಂತರಿಕ ದೂರು ಸಮಿತಿಯು ಸ್ಥಾಪನೆಯಾಗದಿದ್ದಲ್ಲಿ ಮತ್ತು ಮಾಲೀಕರ ವಿರುದ್ದವೇ ದೂರುಗಳನ್ನು ಸ್ವೀಕರಿಸಲು, ಅಸಂಘಟಿತ ಕಾರ್ಮಿಕ ವಲಯದ ದೂರುಗಳನ್ನು ಸ್ವೀಕರಿಸಲು ಮತ್ತು ವಿಚಾರಣೆ ಮಾಡಲು ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ದೂರು ಸಮಿತಿಯನ್ನು ರಚಿಸುವಂತೆ
ಸರ್ಕಾರವು ಆದೇಶಿಸಿದ್ದು, ಅದರಂತೆ ಜಿಲ್ಲೆಯಲ್ಲಿ ರಚಿಸಲಾದ ಸ್ಥಳೀಯ ದೂರು ಸಮಿತಿಗೆ ಅಧ್ಯಕ್ಷರಾಗಿ ಕುಂಜಿಬೆಟ್ಟುವಿನ ಡಾ. ನಿರ್ಮಲಾ ಕುಮಾರಿ ಕೆ ಹಾಗೂ ಸದಸ್ಯರುಗಳನ್ನಾಗಿ ಬ್ರಹ್ಮಾವರ ತಾಲೂಕು ಕಲ್ಲುಗುಡ್ಡೆಯ ಗೌರಿ ಕೊರಗ, ನಾಯರ್‌ಕೇರಿಯ ಡಾ. ನಿಕೇತನ ಹಾಗೂ ನಗರದ ಕೊಳಂಬೆಯ ದಿವ್ಯಾರಾಣಿ ಪ್ರದೀಪ ಅವರುಗಳನ್ನು ನೇಮಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.