ಉಡುಪಿ:ಒಡಂಬಡಿಕೆ ಅವಧಿ ಮುಗಿದ ಕೃಷಿ ಯಂತ್ರಧಾರೆ ಕೇಂದ್ರಗಳ ನಿರ್ವಹಣೆಗೆ ಆಸಕ್ತ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಉಡುಪಿ: ಜಿಲ್ಲೆಯಲ್ಲಿ 6 ವರ್ಷದ ಒಡಂಬಡಿಕೆ ಅವಧಿ ಮುಗಿದ ವಿ.ಎಸ್.ಟಿ ಟಿಲ್ರ‍್ಸ್ ಮತ್ತು ಟ್ಯಾಕ್ರ‍್ಸ್
ಬೆಂಗಳೂರು ಸಂಸ್ಥೆಯ ವತಿಯಿಂದ ಸ್ಥಾಪಿಸಲಾದ 4 ಹೋಬಳಿ ಮಟ್ಟದ ಕೃಷಿ ಯಂತ್ರಧಾರೆ ಕೇಂದ್ರಗಳಾದ ಕೋಟ, ಕಾಪು, ಕುಂದಾಪುರ ಹಾಗೂ ಕಾರ್ಕಳ ಕೇಂದ್ರಗಳನ್ನು ಆಸಕ್ತಿಯುಳ್ಳ ರೈತ ಉತ್ಪಾದಕ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳಿಗೆ ಹಸ್ತಾಂತರಿಸಬೇಕಾಗಿರುತ್ತದೆ.

ಆಸಕ್ತ ರೈತ ಉತ್ಪಾದಕ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳು ಕಚೇರಿ ವೇಳೆಗಳಲ್ಲಿ ಕೇಂದ್ರಗಳಲ್ಲಿ ಲಭ್ಯವಿರುವ ಯಂತ್ರೋಪಕರಣಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ, ಕೇಂದ್ರಗಳ ನಿರ್ವಹಣೆಗೆ ಆಸಕ್ತಿಯಿದ್ದಲ್ಲಿ ಅರ್ಜಿಗಳನ್ನು ನವೆಂಬರ್ 9 ರ ಒಳಗಾಗಿ ಕೃಷಿ ಇಲಾಖೆಯ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಿಲ್ಲಾ ಮಟ್ಟದ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದಾಗಿದೆ.

ಪ್ರತಿ ಕೃಷಿ ಯಂತ್ರಧಾರೆ ಕೇಂದ್ರಕ್ಕೆ ರೈತ ಉತ್ಪಾದಕ ಸಂಸ್ಥೆಗಳು 50,000 ರೂ. ಹಾಗೂ ಇತರೆ ಸಂಸ್ಥೆಗಳು 1 ಲಕ್ಷ ರೂ. ಇ.ಎಂ.ಡಿ ಬಾಬ್ತನ್ನು ಜಂಟಿ ಕೃಷಿ ನಿರ್ದೇಶಕರು, ಉಡುಪಿ ಇವರ ಹೆಸರಿನಲ್ಲಿ 9 ವರ್ಷಗಳ ಅವಧಿಗೆ ಬ್ಯಾಂಕ್ ಗ್ಯಾರಂಟಿಯನ್ನು ನೀಡಬೇಕು.

ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ವೀಕರಿಸಿದ ಸಂಸ್ಥೆಗಳು ಜಂಟಿ ಕೃಷಿ ನಿರ್ದೇಶಕರೊಂದಿಗೆ 9 ವರ್ಷಗಳ ಒಡಂಬಡಿಕೆಯನ್ನು ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿ ಹಾಗೂ ಟೆಂಡರ್ ಷರತ್ತುಗಳಿಗಾಗಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.