ಉಡುಪಿ: ಆಪತ್ಭಾಂದವ ಈಶ್ವರ್ ಮಲ್ಪೆ ಅವರ ಮಗ ದಿ. ನಿರಂಜನ್ ಅವರ ನೆನಪಿಗಾಗಿ ಟೀಮ್ ಈಶ್ವರ್ ಮಲ್ಪೆ ವತಿಯಿಂದ 2ನೇ ವರ್ಷದ ಸಹಾಯಧನ ಹಾಗೂ ಅಶಕ್ತರಿಗೆ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮವು ಇಂದು ಸಂಜೆ 5 ಗಂಟೆಗೆ ಮಲ್ಪೆ ಬೀಚ್ ನಲ್ಲಿ ನಡೆಯಲಿದೆ ಎಂದು ಸಮಾಜ ಸೇವಕ ಈಶ್ವರ್ ಮಲ್ಪೆ ತಿಳಿಸಿದರು.
ಈ ಬಗ್ಗೆ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಶಾಸಕ ಯಶ್ಪಾಲ್ ಸುವರ್ಣ, ಉದ್ಯಮಿ ಆನಂದ್ ಸಿ ಕುಂದರ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಕರಾವಳಿ ಕಾವಲು ಪಡೆ ಎಸ್ಪಿ ಮಿಥುನ್, ಮಲ್ಪೆ ಠಾಣಾಧಿಕಾರಿ ರವಿ, ನ್ಯಾಯವಾದಿ ಪ್ರವೀಣ್ ಪೂಜಾರಿ ಸೇರಿದಂತೆ ಅನೇಕರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 14 ಸಾಧಕರು ಹಾಗು ಗಂಗೊಳ್ಳಿಯ ಮುಳುಗುತಜ್ಞ ದಿನೇಶ್ ಖಾರ್ವಿ ಮತ್ತು ಅವರ ತಂಡವನ್ನು ಸನ್ಮಾನಿಸಲಾಗುವುದು. ಮಲ್ಪೆ ಆಸುಪಾಸಿನ 5 ಸರಕಾರಿ ಶಾಲೆಯ ಪ್ರಭಾನಿತ್ವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ ಸಹಾಯಧನ ವಿತರಣೆ ಮಾಡಲಾಗುವುದು. ಇಬ್ಬರು ಯುವಕರಿಗೆ ಆಟೋ ರಿಕ್ಷಾವನ್ನು ನೀಡಲಿದ್ದೇವೆ ಎಂದು ಅವರು ತಿಳಿಸಿದರು.
ಸಮಾಜದ ಉಚಿತ ಸೇವೆಗೆ ಶವ ಶೀತಲಿಕರಣ( ಫ್ರೀಜರ್ ಬಾಕ್ಸ್) ಲೋಕಾರ್ಪಣೆ, ಅನಾರೋಗ್ಯ ಪೀಡಿತರಿಗೆ ವೀಲ್ ಚೇರ್ ನ ಹಸ್ತಾಂತರ ನಡೆಯಲಿದೆ. ನಂತರ ಸ್ಮಾರ್ಟ್ ಗೈಯ್ಸ್ ಡ್ಯಾನ್ಸ್ ಅಕಾಡೆಮಿಯಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಟೀಮ್ ಈಶ್ವರ್ ಮಲ್ಪೆಯ ಶಿವರಾಜ್, ದೀಕ್ಷಿತ್, ಬಿಲಾಲ್ ಇದ್ದರು.