ನವದೆಹಲಿ: ದೇಶಾದ್ಯಂತ ಇಂದು ಡಿಜಿಟಲ್ ಕ್ರಾಂತಿಯ ಪರಿಣಾಮ ಬಹುತೇಕ ಜನರು ಆನ್ ಲೈನ್, ಫೋನ್ ಪೇ, ಗೂಗಲ್ ಪೇ, ಯುಪಿಐ ಪೇಮೆಂಟ್ ಮೊರೆ ಹೋಗಿದ್ದಾರೆ. ಆದರೆ ಇದೀಗ ಯುಪಿಐ ಬಳಸಿ ಹಣ ಪಾವತಿಸುವ ಅಥವಾ ಹಣ ಪಡೆಯುವ ಬಳಕೆದಾರರಿಗೆ 2025ರ ಫೆ.1ರಿಂದ ಹೊಸ ನಿಯಮ ಜಾರಿಯಾಗಲಿದೆ ಎಂಬುದನ್ನು ಗಮನಿಸಬೇಕಾಗಿದೆ…
ಏನಿದು ಹೊಸ ನಿಯಮ?
ಫೆಬ್ರವರಿ 1ರಿಂದ ವಿಶೇಷ ಅಕ್ಷರಗಳನ್ನು (Special characters) ಹೊಂದಿರುವ ಯುಪಿಐ ಐಡಿ ಕಾರ್ಯನಿರ್ವಹಿಸುವುದಿಲ್ಲ. ದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI)ದ ಹೊಸ ನಿಯಮದ ಪ್ರಕಾರ ಯುಪಿಐ ವಹಿವಾಟಿನ ಐಡಿ ಕಡ್ಡಾಯವಾಗಿ ಅಕ್ಷರಗಳಲ್ಲಿ ಇರಬೇಕು. ಯಾವುದೇ ವಹಿವಾಟಿನ ಐಡಿ ವಿಶೇಷ ಅಕ್ಷರಗಳನ್ನು ಹೊಂದಿದ್ದರೆ…ನಿಮ್ಮ ವಹಿವಾಟು/ಪಾವತಿ ಸ್ವಯಂಚಾಲಿತವಾಗಿ ತಿರಸ್ಕೃತಗೊಳ್ಳಲಿದೆ!
ಎಲ್ಲಾ ಯುಪಿಐ ವಹಿವಾಟುಗಳು ತಾಂತ್ರಿಕ ವೈಶಿಷ್ಟ್ಯತೆಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಡಿಜಿಟಲ್ ಪಾವತಿ ಪ್ಲ್ಯಾಟ್ ಫಾರಂ ಸುರಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಎನ್ ಪಿಸಿಐ ವಿವರಿಸಿದೆ.ಜನವರಿ 9ರಂದು ಎನ್ ಪಿಸಿಐ ಹೊರಡಿಸಿರುವ ಪ್ರಕಟನೆ ಪ್ರಕಾರ, ಫೆ.1ರಿಂದ ಅನ್ವಯವಾಗುವ ನಿಯಮದಲ್ಲಿ ಎಲ್ಲಾ ಯುಪಿಐ ವಹಿವಾಟು ಐಡಿಗಳು ಕಡ್ಡಾಯವಾಗಿ ಅಕ್ಷರಗಳನ್ನು ಹೊಂದಿರಬೇಕು. ಅಂದರೆ ಯಾವುದೇ ಯುಪಿಐ ವಹಿವಾಟಿನ ಐಡಿ ಸ್ಪೆಷಲ್ ಕ್ಯಾರೆಕ್ಟರ್ ಗಳಾದ @, !, & ಅಥವಾ #ಗಳಂತಹ ಚಿಹ್ನೆ ಹೊಂದಿದ್ದರೆ…ನಿಮ್ಮ ವಹಿವಾಟು ಪಾವತಿ ತಿರಸ್ಕೃತಗೊಳ್ಳಲಿದೆ ಎಂದು ತಿಳಿಸಿದೆ.
ಬಹುತೇಕ ಯುಪಿಐ ಬಳಕೆದಾರರು ತಮ್ಮ ಐಡಿಗಳನ್ನು ಟೆಕ್ ಮಾನದಂಡಕ್ಕೆ ಅನುಗುಣವಾಗಿ ಬದಲಾಯಿಸಿಕೊಂಡಿದ್ದಾರೆ. ಆದರೆ ಕೆಲವರು ಇನ್ನೂ ವಿಶೇಷ ಕ್ಯಾರೆಕ್ಟರ್ ಗಳನ್ನು ಐಡಿಯಲ್ಲಿ ಬಳಸುವುದನ್ನು ಮುಂದುವರಿಸಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಫೆ.1ರಿಂದ ಕಡ್ಡಾಯವಾಗಿ ಹೊಸ ನಿಯಮ ಜಾರಿಗೊಳಿಸುತ್ತಿದ್ದೇವೆ ಎಂದು ಎನ್ ಪಿಸಿಐ ವಿವರಿಸಿದೆ.