ಆಳ್ವಾಸ್’ನಲ್ಲಿ ವರ್ಷಪೂರ್ತಿ ಉಚಿತ ನೇತ್ರ ತಪಾಸಣಾ ಶಿಬಿರ.

ಮೂಡುಬಿದಿರೆ: ಈ ಪ್ರಕೃತಿಯ ಸೌಂದರ್ಯವನ್ನು ಎಲ್ಲರೂ ಜೀವನಪೂರ್ತಿ ತಮ್ಮ ಕಣ್ಣುಗಳಿಂದ ಸವಿಯಬೇಕು ಎಂಬ ಉದ್ದೇಶವಿಟ್ಟುಕೊಂಡು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮೂಖಾಂತರ ಈ ವರ್ಷಪೂರ್ತಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ವಿದ್ಯಾಗಿರಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ನುಡಿದರು.

ಮಾ. 15ರಂದು ವಿದ್ಯಾಗಿರಿಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆವರಣದಲ್ಲಿ ಬಂಟರ ಸಂಘ ಮೂಡುಬಿದಿರೆಯ ಮಹಿಳಾ ಘಟಕ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ಆರೋಗ್ಯದ ವಿಚಾರದಲ್ಲಿ ಮೂಢನಂಬಿಕೆ ತೊಲಗಿ ನಂಬಿಕೆ ಮಾತ್ರ ಉಳಿಯಬೇಕು. ಸಮಾಜದ ಎಲ್ಲಾ ಸಮುದಾಯಗಳ ಕಟ್ಟಕಡೆಯ ವ್ಯಕ್ತಿಯೂ ಆರೋಗ್ಯ ವಂತನಾಗಿರಬೇಕು ಎಂಬ ಉದ್ದೇಶದಿಂದ ಆಳ್ವಾಸ್ ನಲ್ಲಿ ಅರ್ಥಪೂರ್ಣ ರೀತಿಯಲ್ಲಿ ಉಚಿತ ನೇತ್ರ ಶಿಬಿರಗಳ ವರ್ಷವನ್ನು ಆಯೋಜಿಸಲು ಮುಂದಾಗಿದ್ದೇವೆ. ಫೆ. 10ರಂದು ಈ ಶಿಬಿರಗಳಿಗೆ ವಿದ್ಯುಕ್ತ ಚಾಲನೆ ದೊರೆತಿದ್ದು ಮಾ.14ರಂದು ಯುವವಾಹಿನಿ ಸಂಘಟನೆಯ ಜೊತೆಗೆ ಮತ್ತು ಇಂದು ಬಂಟರ ಸಂಘ ಮಹಿಳಾ ಘಟಕದ ಜೊತೆಗೂಡಿ ಶಿಬಿರ ಆಯೋಜಿಸಲಾಗಿದೆ. ಮಾ. 28ರಂದು ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಹಾಗೂ ಎಪ್ರಿಲ್ ತಿಂಗಳ ಪ್ರಥಮ ವಾರದಲ್ಲಿ ಮುಸ್ಲಿಂ ಸಮಾಜದ ಸಂಘಟನೆಗಳ ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗುವುದು ಎಂದರು.

ಶಿಬಿರದಲ್ಲಿ ಉಚಿತ ಕಣ್ಣಿನ ಪರೀಕ್ಷೆ, ಅಗತ್ಯವಿರುವವರಿಗೆ ಉಚಿತ ಕನ್ನಡಕ ವಿತರಣೆ ಮತ್ತು ಮಂಗಳೂರಿಗೆ ನಮ್ಮದೇ ವಾಹನದಲ್ಲಿ ಕರೆದುಕೊಂಡು ಹೋಗಿ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದರು. ಈ ಸಂದರ್ಭ ಡಾ. ಎಂ. ಮೋಹನ ಆಳ್ವ ಅವರು ಫೆ. 10ರಂದು ನಡೆದ ಶಿಬಿರದ ಫಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಿದರು.

ಮಿಜಾರುಗುತ್ತು ಶ್ರೀಮತಿ ಮೀನಾಕ್ಷಿ ಆಳ್ವ ಶಿಬಿರವನ್ನು ಉದ್ಘಾಟಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಮತ್ತು ಆಳ್ವಾಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಹನಾ ಶೆಟ್ಟಿ, ಬಂಟರ ಸಂಘ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶೋಭಾ ಎಸ್. ಹೆಗ್ಡೆ, ಪ್ರಸಾದ್ ನೇತ್ರಾಲಯದ ನೇತ್ರ ತಜ್ಞೆ ಡಾ. ಶೀತಲ್, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ. ಉಪಸ್ಥಿತರಿದ್ದರು.ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ ಭಟ್ ಸ್ವಾಗತಿಸಿದರು. ಅಭಿಮನ್ಯಾ ಮತ್ತು ಶ್ರೀನಿಧಿ ಪ್ರಾರ್ಥಿಸಿದರು. ಹರಿಣಾಕ್ಷಿ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸೌಮ್ಯಾ ಶೆಟ್ಟಿ ವಂದಿಸಿದರು.