ಆರೋಗ್ಯವನ್ನು ಕಾಪಾಡುವ ದೇವರು, ವೈದ್ಯರು..!!!

ಸಾಮಾನ್ಯವಾಗಿ ವೈದ್ಯರನ್ನು ದೇವರ ಎರಡನೇ ರೂಪ ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಆಸ್ತಿ ಅಂತಸ್ತು ಎಷ್ಟು ಮುಖ್ಯವೋ ಆರೋಗ್ಯ ಕೂಡ ಬಹಳ ಮುಖ್ಯವಾಗಿರುತ್ತದೆ. ಮನುಷ್ಯನ ಆರೋಗ್ಯದಲ್ಲಿ ಅಪಾಯ ಬಂದಾಗ ಈ ವೈದ್ಯರು ಆ ಮನುಷ್ಯನ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ತನ್ನನ್ನೇ ನಂಬಿ ಬಂದ ರೋಗಿಯನ್ನು ಎಲ್ಲಿಯೂ ಧೈರ್ಯ ಕಳೆದುಕೊಳ್ಳದಂತೆ ಸ್ನೇಹಿತರಂತೆ ಜೊತೆಗಿದ್ದು ಸಾಂತ್ವನ ನೀಡಿ ರೋಗಿಯ ಪಾಲಿಗೆ ಈ ವೈದ್ಯರು ರೋಗಿಗೆ ಸ್ನೇಹಿತರಂತೆ ಆಗಿಬಿಡುತ್ತಾರೆ.

ಬದುಕಿಗೊಂದು ಸ್ಪೂರ್ತಿ ವೈದ್ಯರು:
ತನ್ನ ಜೀವನವೇ ಕೊನೆಗೊಂಡಿತು ಎಂದು ಭರವಸೆಯನ್ನು ಕಳೆದುಕೊಂಡವರಿಗೆ ಭರವಸೆಯ ಮಾತುಗಳನ್ನಾಡಿ ಧೈರ್ಯ ತುಂಬುತ್ತಾರೆ ವೈದ್ಯರು.
ವೈದ್ಯರೇ ಸಾಕ್ಷಾತ್ ದೇವರು ಎನ್ನುವ ಮಾತು ಮಾತ್ರ ಅದೆಷ್ಟು ಸತ್ಯ. ನಮ್ಮ ಜೀವ ಹೋಗುವ ಸಮಯದಲ್ಲಿ ಆ ದೇವರು ಬಂದು ನಮ್ಮ ಕಣ್ಣೆದುರು ಪ್ರತ್ಯಕ್ಷವಾದಂತೆ ಈ ವೈದ್ಯರು ಬರುತ್ತಾರೆ ಜೀವವನ್ನೇ ಕಾಪಾಡುತ್ತಾರೆ.

ಕೆಲವೊಂದು ಬಾರಿ ವೈದ್ಯರು ಜೀವನದಲ್ಲಿ ಎಲ್ಲರಿಗಿಂತ ಮುಖ್ಯವಾಗಿ ಬಿಡುತ್ತಾರೆ. ರೋಗದಿಂದ ಬಳಲಿ ಎಲ್ಲರೂ ಆತನನ್ನು ರೋಗಿ ಎಂದು ಚುಚ್ಚು ಮಾತುಗಳಿಂದ ಕಡೆಗಣಿಸಿ ದೂರವಿಟ್ಟಾಗ ಆತನ ಕೈ ಹಿಡಿಯುವುದೇ ಈ ವೈದ್ಯರು.

ಉದಾ: ಒಂದು ನೀರಿನಲ್ಲಿ ದೋಣಿ ಸಾಗುತ್ತಾ ಹೋಗುತ್ತಿರುವಾಗ ದೊಡ್ಡ ಅಲೆಗಳು ಅಪ್ಪಳಿಸಿದರೆ ಸಾಕು ಆ ದೋಣಿ ಮುಗ್ಗರಿಸುತ್ತದೆ. ಇನ್ನೇನು ಮುಳುಗಿಬಿಡುತ್ತದೆ ಎನ್ನುವಷ್ಟರಲ್ಲಿ ಅಂಬಿಗ, ಆ ದೋಣಿ ನೀರಿನಲ್ಲಿ ಮುಳುಗದಂತೆ ಜಾಗೃತಿ ವಹಿಸಿ ಕೊನೆಗೂ ದೋಣಿಯನ್ನು ದಡ ದಾಟಿಸುತ್ತಾನೆ. ಅದರಂತೆ ನಿಜ ಜೀವನದಲ್ಲಿ ಮನುಷ್ಯರು ತನ್ನ ಸುಂದರ ಬದುಕನ್ನು ನಡೆಸುತ್ತಿರುವಾಗ ಅನಾರೋಗ್ಯ ಬಂದು ಎಲ್ಲರಿಂದ ದೂರಾಗುವ ಸಂದರ್ಭ ಬಂದಾಗ ವೈದ್ಯರು ಆ ರೋಗಿಯ ಜೊತೆಗಿದ್ದು ರೋಗಿಯ ಜೀವ ಉಳಿಸುತ್ತಾರೆ.

ಇನ್ನು ಹೇಳಬೇಕಾದರೆ ಈ ವೈದ್ಯರು ರೋಗಿಗಳ ಮೇಲೆ ತೋರಿದ ಕಾಳಜಿ ಎಂದು ಮರೆಯಲಾಗದು. ತನ್ನ ಸ್ವಂತ ಮನೆಯವರಂತೆ ಪ್ರೀತಿ ಕಾಳಜಿ ವಹಿಸುವವರು ಈ ವೈದ್ಯರು.

ವೈದ್ಯರು ತಾನು ಎಂತಹ ಸಂದರ್ಭದಲ್ಲಿದ್ದರೂ ತನ್ನ ರೋಗಿಗೆ ತೊಂದರೆಯಾಗುತ್ತಿದೆ ಎಂದು ತಿಳಿದರೆ ಆತನು ತನ್ನ ಮನೆ-ಹೆಂಡತಿ ಮಕ್ಕಳನ್ನು ಬಿಟ್ಟು ತನ್ನ ರೋಗಿ ಪ್ರಾಣ ಉಳಿಸುವುದಕ್ಕಾಗಿ ಬರುತ್ತಾರೆ. ಆದರೆ ಒಂದಂತೂ ಮರೆಯಲಾಗದು. ಕೊರೋನದ ವೇಳೆಯಲ್ಲಿ ಇಡೀ ದೇಶವೇ ಬೆಚ್ಚಿಬಿದ್ದಾಗ ತಮ್ಮ ಪ್ರಾಣವನ್ನೇ ಪಣಕಿಟ್ಟು ಹಲವಾರು ಜೀವಗಳನ್ನು ಈ ವೈದ್ಯರು ಉಳಿಸಿದ್ದಾರೆ.

ಒಂದು ರೀತಿಯಾಗಿ ನಮ್ಮ ಆರೋಗ್ಯವನ್ನು ಸುಸ್ಥಿರವಾಗಿರಿಸಿ, ಸಮಾಜವನ್ನು ರೋಗ-ಮುಕ್ತರನ್ನಾಗಿಸಿ, ಸುಂದರ ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಈ ವೈದ್ಯರು ಪ್ರಮುಖ ಪಾತ್ರವಹಿಸುತ್ತಾರೆ. ನಮ್ಮ ಜೀವನದಲ್ಲಿ ಹುಟ್ಟಿನಿಂದ ಸಾವಿನವರೆಗೂ ಈ ವೈದ್ಯರು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಜೊತೆಯಲ್ಲಿರುತ್ತಾರೆ. ಅದೇ ಕಾರಣಕ್ಕಾಗಿ ನಮ್ಮ ಜೀವನದಲ್ಲಿ ವೈದ್ಯರ ಪಾತ್ರವನ್ನು ನೆನಪಿಟ್ಟುಕೊಳ್ಳಲು ಮತ್ತು ಅವರಿಗೆ ಗೌರವವನ್ನು ನೀಡಲು ಪ್ರತಿವರ್ಷ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ನಂಬಿ ಬಂದ ರೋಗಿಗಳನ್ನು ಮಗುವಂತೆ ಆರೈಕೆ ಮಾಡುವ ಜೀವವೇ ಈ ವೈದ್ಯರು. ಅವರಿಗೊಂದು ನಮ್ಮ ನಮನ.

-ಪ್ರತೀಕ್ಷಾ ರಾವ್ ಶಿರ್ಲಾಲ್ .
ತೃತೀಯ ಪತ್ರಿಕೋದ್ಯಮ ವಿಭಾಗ, ಎಂಪಿಎಂ ಕಾಲೇಜು ಕಾರ್ಕಳ.