ಮಂಗಳೂರು: ಶಕ್ತಿನಗರದ ಶಕ್ತಿ ಪ.ಪೂ. ಕಾಲೇಜಿನಲ್ಲಿ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ರಾಜ್ಯ ಸಮಿತಿ (ಕುಪ್ಮಾ)ದ ಸಭೆಯು ಗೌರವ ಅಧ್ಯಕ್ಷರಾದ ಡಾ.ಕೆ.ಸಿ ನಾೈಕ್, ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಮತ್ತು ಕಾರ್ಯದರ್ಶಿ ನರೇಂದ್ರ ನಾಯಕ್‍ರ ಮುಂದಾಳತ್ವದಲ್ಲಿ ಇತ್ತೀಚೆಗೆ ನಡೆಯಿತು.
ಈ ಸಭೆಯಲ್ಲಿ ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಮಾರ್ಚ್ 25 ರಂದು ನಡೆಯಲಿರುವ ಒಂದು ದಿನದ ಕುಪ್ಮಾ ಜಿಲ್ಲಾ ಸಮಿತಿಯ ಸಂಯೋಜಕರ ಕಾರ್ಯಾಗಾರದ ಕುರಿತಂತೆ ಚರ್ಚೆ ನಡೆಯಿತು. ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಸುಮಾರು 75 ಮಂದಿ ಸಂಯೋಜಕ ಸದಸ್ಯರು ಭಾಗವಹಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈಗಾಗಲೇ ಆಯ್ಕೆ ಆಗಿರುವ ಕುಪ್ಮಾ ಜಿಲ್ಲಾ ಸಂಯೋಜಕರಿಗೆ ಕುಪ್ಮಾವನ್ನು ಅವರ/ಆಯಾಯ ಜಿಲ್ಲೆಗಳಲ್ಲಿ ವಿಸ್ತರಿಸುವುದು ಹೇಗೆ ಎನ್ನುವ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಮಾರ್ಚ್ 25, 2025 ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಆಳ್ವಾಸ್ ಕಾಲೇಜು, ಮೂಡುಬಿದಿರೆಯಲ್ಲಿ ನಡೆಸುವ ಬಗ್ಗೆ ವೇಳಾಪಟ್ಟಿಯ ನಿರ್ಣಯವನ್ನು ಕೈಗೊಳ್ಳಲಾಯಿತು.
ಈ ಕಾರ್ಯಕ್ರಮವು ಒಂದು ದಿನದ ಕಾರ್ಯಾಗಾರವಾಗಿರುತ್ತದೆ. ಭಾಗವಹಿಸುವ ಜಿಲ್ಲಾ ಸಂಯೋಜಕರಿಗೆ ಸದಸ್ಯರಿಗೆ ವಾಸ್ತವ್ಯ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ಆಳ್ವಾಸ್ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಡಾ.ಮೋಹನ್ ಆಳ್ವರವರು
ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ವೇಳಾಪಟ್ಟಿ ಈ ಕೆಳಗಿನಂತಿದೆ:
ಬೆಳಿಗ್ಗೆ 09.00 ರಿಂದ 10.00 ರ ವರೆಗೆ ನೊಂದಣಿ ಮತ್ತು ಉಪಾಹಾರ 10.00 ರಿಂದ 11.00 ರ ವರೆಗೆ ಕಾರ್ಯಾಗಾರದ ಉದ್ಘಾಟನೆ 11.00 ರಿಂದ 11.15 ರ ವರೆಗೆ ಚಾ ವಿರಾಮ 11.15 ರಿಂದ 12.15 ರವರೆಗೆ ಮೊದಲ ಅವಧಿಯ ಕಾರ್ಯಾಗಾರವನ್ನು ಕುಪ್ಮಾ ಜಿಲ್ಲಾವಾರು ಸಮಿತಿ ರಚನೆಯ ಬಗ್ಗೆ ಡಾ ಸುಧಾಕರ ಶೆಟ್ಟಿ, ಉಪಾಧ್ಯಕ್ಷರು, ರಾಜ್ಯ ಕುಪ್ಮಾ ಸಮಿತಿ ನಡೆಸಿಕೊಡುತ್ತಾರೆ. 12.15 ರಿಂದ 01.15 ರವರೆಗೆ ಎರಡೆಯ ಅವಧಿಯ ಕಾರ್ಯಾಗಾರದಲ್ಲಿ ಪ್ರಶ್ನೋತ್ತರ ಮಾಲಿಕೆಯನ್ನು ವಿಶ್ವನಾಥ, ಜೊತೆ ಕಾರ್ಯದರ್ಶಿ, ಕುಪ್ಮಾ ರಾಜ್ಯ ಸಮಿತಿ ಇವರು ನಡೆಸಿಕೊಡುತ್ತಾರೆ. 01.15 ಸಮಾರೋಪ ಸಮಾರಂಭವನ್ನು ನರೇಂದ್ರ ಎಲ್ ನಾಯಕ್, ಕಾರ್ಯದರ್ಶಿ, ರಾಜ್ಯ ಕುಪ್ಮಾ ಸಮಿತಿ ನಡೆಸಲಿದ್ದಾರೆ. 01.45 ರಿಂದ ಊಟದೊಂದಿಗೆ ಮುಕ್ತಾಯ ಜೂನ್ ಅಂತ್ಯದೊಳಗೆ ರಾಜ್ಯವಾರು ಎಲ್ಲಾ ಜಿಲ್ಲೆಗಳಲ್ಲಿ ಕುಪ್ಮಾ ಸಮಿತಿಗೆ ಸದಸ್ಯರನ್ನು ಸೇರ್ಪಡೆಗೊಳಿಸುವುದರ ಜತೆಯಲ್ಲಿ ಜಿಲ್ಲಾವಾರು ಕುಪ್ಮಾ ಸಮಿತಿಗಳನ್ನು ರಚನೆ ಮಾಡಿ ಗೌರವ ಅಧ್ಯಕ್ಷರು 01 / ಅಧ್ಯಕ್ಷರು 01 / ಉಪಾಧ್ಯಕ್ಷರು 04/ ಕಾರ್ಯದರ್ಶಿಗಳು 01 / ಸಹಕಾರ್ಯದರ್ಶಿ 02/ ಖಚಾಂಚಿ 01 ಸೇರಿದಂತೆ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಿ ಸಮಿತಿಯನ್ನು ರಚಿಸಿ ಕಾರ್ಯನಿರ್ವಹಿಸುವುದು ಇದರ ಉದ್ದೇಶವಾಗಿದೆ.
ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ರಾಜ್ಯ ಕುಪ್ಮಾ ಸಮಿತಿಯ ಸದಸ್ಯರು ಸೇರಿದಂತೆ ರಾಜ್ಯದ ಜಿಲ್ಲಾ ಸಂಯೋಜಕರು ತಪ್ಪದೇ ಭಾಗವಹಿಸಬೇಕೆಂದು ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಕುಪ್ಮಾದ ರಾಜ್ಯದ ಗೌರವ ಅಧ್ಯಕ್ಷರು ಹಾಗೂ ಶಕ್ತಿ ಪ ಪೂ ಕಾಲೇಜಿನ ಸಂಸ್ಥಾಪಕರಾದ ಡಾ.ಕೆ.ಸಿ. ನಾೈಕ್, ಇನ್ನೊರ್ವ ಗೌರವ ಅಧ್ಯಕ್ಷರು ಹಾಗೂ ವೆಂಕಟರಮಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ.ರಾಧಕೃಷ್ಣ ಶೆಣೈ, ರಾಜ್ಯ ಅಧ್ಯಕ್ಷರು ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಮೋಹನ್ ಆಳ್ವ, ರಾಜ್ಯ ಕಾರ್ಯದರ್ಶಿ ಹಾಗೂ ಎಕ್ಸಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ನರೇಂದ್ರ ನಾಯಕ್, ರಾಜ್ಯ ಉಪಾಧ್ಯಕ್ಷರು ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ರಾಜ್ಯ ಉಪಾಧ್ಯಕ್ಷರು ಹಾಗೂ ಸೂರಜ್ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮಂಜುನಾಥ್ ರೇವಣ್‍ಕರ್,ಜೊತೆ ಕಾರ್ಯದರ್ಶಿ ವಿಶ್ವನಾಥ್ ಶೇಷಾಚಲ, ಕುಪ್ಮಾ ರಾಜ್ಯ ಸಮಿತಿ ಸದಸ್ಯರಾದ
ಬಿ.ಎ.ನಾಝೀರ್, ಕೋಶಾಧಿಕಾರಿ ರಮೇಶ್ ಕೆ., ಸಂಯೋಜಕರಾದ ಕರುಣಾಕರ್ ಬಲ್ಕೂರ್ ಉಪಸ್ಥಿತರಿದ್ದರು.












