ಮುಂಬೈ: ಭಾರತೀಯ ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಅವರ ವಿಚ್ಛೇದನದ ಸುದ್ದಿ ತಿಂಗಳುಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು. ಇದೀಗ ಅಧಿಕೃತವಾಗಿದೆ.
ಕಳೆದ ಕೆಲವು ತಿಂಗಳಿನಿಂದ ಚಾಹಲ್ ಮತ್ತು ಧನಶ್ರೀ ಸಾಮಾಜಿಕ ಜಾಲತಾಣಗಳಲ್ಲಿ ರಹಸ್ಯ ಪೋಸ್ಟ್‌ಗಳನ್ನು ಹಂಚಿಕೊಂಡು, ತಮ್ಮ ಡಿವೋರ್ಸ್ ಬಗ್ಗೆ ಸುಳಿವು ನೀಡಿದ್ದರು.
ದಂಪತಿಗಳ ಅಂತಿಮ ವಿಚಾರಣೆ ಮತ್ತು ಎಲ್ಲಾ ಅಗತ್ಯ ಔಪಚಾರಿಕತೆಗಳು ಗುರುವಾರ (ಫೆ.20) ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ನಡೆದವು ಎಂದು ವರದಿಯಾಗಿದೆ. ಕೋರ್ಟ್ ಗೆ ಇಬ್ಬರೂ ಹಾಜರಾಗಿದ್ದರು.ಎಬಿಪಿ ನ್ಯೂಸ್ ವರದಿಯ ಪ್ರಕಾರ, ನ್ಯಾಯಾಧೀಶರು ದಂಪತಿಗೆ ಸಮಾಲೋಚನೆ ಪಡೆಯಲು ಸಲಹೆ ನೀಡಿದರು. ಇದು ಸುಮಾರು 45 ನಿಮಿಷಗಳ ಕಾಲ ನಡೆಯಿತು. ಕೌನ್ಸಲಿಂಗ್ ನಂತರ, ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ಬಯಸುತ್ತಿದ್ದಾರೆ ಎಂದು ನ್ಯಾಯಾಧೀಶರಿಗೆ ತಿಳಿಸಿದರು.

ಚಾಹಲ್ ಮತ್ತು ಧನಶ್ರೀ ಕಳೆದ 18 ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಇದೇ ವೇಳೆ ಬಹಿರಂಗವಾಯಿತು. ವಿಚ್ಛೇದನವನ್ನು ಕೋರುವ ಹಿಂದಿನ ಸಂಭವನೀಯ ಕಾರಣದ ಬಗ್ಗೆ ಕೇಳಿದಾಗ, ದಂಪತಿಗಳು ‘ಹೊಂದಾಣಿಕೆಯ ಸಮಸ್ಯೆಗಳನ್ನು’ ಹೊಂದಿದ್ದಾರೆಂದು ಹೇಳಿದರು.
ಗುರುವಾರ ಸಂಜೆ 4.30ರ ವೇಳೆ ನ್ಯಾಯಾಧೀಶರು ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿದರು.
ಜೀವನಾಂಶದ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ.ಇದರ ಬಳಿಕ ಚಾಹಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, “ದೇವರು ನನ್ನನ್ನು ಎಣಿಸುವುದಕ್ಕಿಂತ ಹೆಚ್ಚು ಬಾರಿ ರಕ್ಷಿಸಿದ್ದಾನೆ. ಹಾಗಾಗಿ ನನಗೆ ಗೊತ್ತಿಲ್ಲದಷ್ಟು ಬಾರಿ ನಾನು ರಕ್ಷಿಸಲ್ಪಟ್ಟಿದ್ದೇನೆ ಎಂದು ನಾನು ಊಹಿಸಬಲ್ಲೆ. ದೇವರೇ, ನನಗೆ ತಿಳಿದಿಲ್ಲದಿದ್ದರೂ ಯಾವಾಗಲೂ ನನ್ನೊಂದಿಗಿದ್ದಕ್ಕಾಗಿ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಧನಶ್ರೀ ವರ್ಮಾ ಕೂಡಾ ಪೋಸ್ಟ್ ಮಾಡಿದ್ದು, “ಒತ್ತಡದಿಂದ ಧನ್ಯತೆಯವರೆಗೆ. ದೇವರು ನಮ್ಮ ಚಿಂತೆ ಮತ್ತು ಪರೀಕ್ಷೆಗಳನ್ನು ಆಶೀರ್ವಾದಗಳಾಗಿ ಹೇಗೆ ಪರಿವರ್ತಿಸಬಲ್ಲನು ಎಂಬುದು ಅದ್ಭುತವಲ್ಲವೇ? ನೀವು ಇಂದು ಯಾವುದಾದರೂ ವಿಷಯದ ಬಗ್ಗೆ ಒತ್ತಡಕ್ಕೊಳಗಾಗಿದ್ದರೆ, ನಿಮಗೆ ಒಂದು ಆಯ್ಕೆ ಇದೆ ಎಂದು ತಿಳಿಯಿರಿ. ನೀವು ಚಿಂತಿಸುತ್ತಲೇ ಇರಬಹುದು ಅಥವಾ ನೀವು ಎಲ್ಲವನ್ನೂ ದೇವರಿಗೆ ಒಪ್ಪಿಸಿ ಎಲ್ಲದರ ಬಗ್ಗೆ ಪ್ರಾರ್ಥಿಸಲು ಆಯ್ಕೆ ಮಾಡಬಹುದು. ದೇವರು ನಿಮ್ಮ ಒಳಿತಿಗಾಗಿ ಎಲ್ಲವನ್ನೂ ಒಟ್ಟಿಗೆ ಕೆಲಸ ಮಾಡಬಲ್ಲನೆಂಬ ನಂಬಿಕೆಯಲ್ಲಿ ಶಕ್ತಿಯಿದೆ” ಎಂದು ಬರೆದುಕೊಂಡಿದ್ದಾರೆ.












