ಅತ್ಯಾಚಾರ ಪ್ರಕರಣ: ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಿದ ಎಸ್ಐಟಿ.

ರಾಜ್ಯದಲ್ಲಿ ಅಶ್ಲೀಲ ಪೆನ್ ಡ್ರೈವ್ ವಿಡಿಯೋ ಬಹಿರಂಗ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿದ್ದ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಇಂದು ಜರ್ಮನಿಯ ಮ್ಯೂನಿಕ್ ನಿಂದ ಬೆಂಗಳೂರಿಗೆ ಆಗಮಿಸಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.

ರಾಜ್ಯದಲ್ಲಿ ಏಪ್ರಿಲ್ 26ರಂದು ನಡೆದ ಮೊದಲ ಹಂತದ ಲೋಕಸಭೆ ಚುನಾವಣೆ ಮತದಾನ ಬಳಿಕ ಏಪ್ರಿಲ್ 27ರಂದು ಪ್ರಜ್ವಲ್ ರೇವಣ್ಣ ತಮ್ಮ ರಾಜತಾಂತ್ರಿಕ ಪಾಸ್ ಪೋರ್ಟ್ ಬಳಸಿ ಜರ್ಮನಿಗೆ ತೆರಳಿದ್ದರು.

ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ಅಧಿಕಾರಿಗಳು ಇಂದು ಬೆಳಗ್ಗೆ ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ತಮ್ಮ ವಶಕ್ಕೆ ಕೇಳಲಿದ್ದಾರೆ. ಸದ್ಯ ಎಸ್ಐಟಿ ಕಚೇರಿ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ. ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.