ಅಂಬಾತನಯ ಮುದ್ರಾಡಿ ಸಾಹಿತ್ಯದ ಮೂಲಕ ಜೀವಂತ: ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ

ಉಡುಪಿ: ಅಂಬಾತನಯ ಮುದ್ರಾಡಿ ಅವರ ಜೀವನ ಸಾಧನೆ ಮಾದರಿಯಾಗಿದ್ದು, ಅವರೀಗ ನಮ್ಮ ನಡುವೆ ಇಲ್ಲದಿದ್ದರೂ ಅವರ ಕೃತಿ, ಮಾತು, ಭಾಷಾ ಸಾಹಿತ್ಯದಿಂದ ಜೀವಂತವಿದ್ದಾರೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಮುದ್ರಾಡಿ ಶಾಲಾ ವಠಾರದಲ್ಲಿ ಶನಿವಾರ ಪ್ರಸಿದ್ಧ ಸಾಹಿತಿ, ಹರಿದಾಸ, ಅರ್ಥಧಾರಿ, ಪ್ರವಚನಕಾರ, ಚಿಂತಕ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇವಿಯ ಆರಾಧಕರಾಗಿ ಅಂಬಾತನಯ ಎಂಬ ಕಾವ್ಯ ನಾಮದಿಂದ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದು, ಶಿಕ್ಷಣ ಸಂಘಟನೆ, ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಸಾಹಿತಿಗಳಾಗಿ ಅವರು ರಾಜ್ಯಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅಧ್ಯಾಪನ ಜೊತೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. ಭಾಷಾ ಸಂಪನ್ಮೂಲ ವ್ಯಕ್ತಿಯಾಗಿ ಅವಿಭಜಿತ ದ.ಕದಲ್ಲಿ ಶಿಕ್ಷಕರಿಗೆ ಮಾರ್ಗದರ್ಶಕರಾಗಿದ್ದರು. ಅವರ ನಾಟಕ ಕೃತಿ ಮಂಗಳೂರು ವಿವಿಯಲ್ಲಿ ಕನ್ನಡ ಐಚ್ಛಿಕ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗಿದೆ. ಅನೇಕ ಕೃತಿಗಳನ್ನು ರಚಿಸಿ ರಾಜ್ಯಾದ್ಯಂತ ಓಡಾಟ ಮಾಡಿಕೊಂಡು ಉತ್ತಮ ಕೆಲಸ ಮಾಡಿದ್ದಾರೆ. ಅಂಥ ವ್ಯಕ್ತಿ ನಮ್ಮ ಮುಂದೆ ಇಲ್ಲದೇ ಇರಬಹುದು. ಆದರೆ ಅನೇಕ ಕ್ಷೇತ್ರಗಳಲ್ಲಿ ಅವರು ಮಾಡಿರುವ ಸಾಧನೆ ಪ್ರೇರಣಾದಾಯಕವಾಗಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷನಾಗುವಾಗ ಅವರು ನಮ್ಮೊಂದಿಗೆ ಇರಬೇಕು ಎನಿಸುತ್ತಿದೆ. ಅವರು ಅಭಿಮಾನ, ಪ್ರೀತಿ ವಾತ್ಸಲ್ಯದ ವ್ಯಕ್ತಿತ್ವ ಹೊಂದಿದವರಾಗಿದ್ದರು ಎಂದು ಹೇಳಿದರು.

ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಲಿ ಕಡೆಕಾರ್​ ಮಾತನಾಡಿ, ಅಂಬಾತನಯ ಅವರು ವೃತ್ತಿಕಲಾವಿದರಿಗಾಗಿ ಯಕ್ಷಗಾನ ಪ್ರಸಂಗಕರ್ತರಾಗಿ ಕೊಡುಗೆ ನೀಡಿದ್ದಾರೆ. ಪ್ರಾಥಮಿಕ ಶಾಲೆ ಅಧ್ಯಾಪಕರು ಬರೆದ ಕೃತಿ ವಿವಿಯಲ್ಲಿ ಅಧ್ಯಯನಕ್ಕೆ ಯೋಗ್ಯವಾಗಿರುವುದು ಅವರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಎಲ್ಲಾ ರಂಗಗಳಲ್ಲೂ ಅವರು ಛಾಪನ್ನು ಒತ್ತಿದ್ದಾರೆ. ಬದುಕಿನಲ್ಲಿ ಇನ್ನೊಬ್ಬರಿಗೆ ಉಪಕಾರ ಮಾಡುವುದರಲ್ಲಿ ಅಂಬಾತನಯ ಮುದ್ರಾಡಿ ಮಾದರಿಯಾಗಿದ್ದಾರೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸ್ತ್ರೀ ವೇಷಧಾರಿ ಡಾ. ಕೊಳ್ಯೂರು ರಾಮಚಂದ್ರ ರಾವ್​ ಅವರಿಗೆ ಅಂಬಾತನಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಡಾ. ಎಂ.ಎಸ್​.ರಾವ್​ ಮುದ್ರಾಡಿ, ದಿವಾಕರ ಶೆಟ್ಟಿ ಅಭ್ಯಾಗತರಾಗಿದ್ದರು. ಅಂಬಾತನಯ ಮುದ್ರಾಡಿ ಸಹೋದರ ವಿಜಯ ಕುಮಾರ್, ಮಕ್ಕಳಾದ ಸನತ್ ಕುಮಾರ್ , ಪ್ರಸನ್ನ , ಶ್ರೀಮುದ್ರಾಡಿ , ಲಲಿತ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ರುಕ್ಮಾಂಗದ ಚರಿತ್ರೆ ತಾಳಮದ್ದಲೆ ನಡೆಯಿತು.