ದಿನವನ್ನು ಕಾಫಿಯಿಲ್ಲದೆ ಆರಂಭಿಸಲು ಅನೇಕರಿಗೆ ಸಾಧ್ಯವೇ ಇಲ್ಲ. ಒಂದು ಕಪ್ ಕಾಫಿ ದಿನದ ಶಕ್ತಿಗೆ ಕಾರಣವಾಗುವುದಷ್ಟೇ ಅಲ್ಲ, ದೇಹಕ್ಕೆ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.ಇಂದು ಅಕ್ಟೋಬರ್ 1 ವಿಶ್ವ ಕಾಫಿ ದಿನ. ಬನ್ನಿ ಒಂದು ಕಪ್ ಕಾಫಿ ಕುಡಿಯುವುದರಿಂದ ಏನೆನೆಲ್ಲಾ ಲಾಭಗಳಿವೆ ಎನ್ನುವುದನ್ನು ತಿಳಿದುಕೊಳ್ಳೋಣ.

ಬರೀ ಒಂದು ಕಪ್ ಕಾಫಿಯಲ್ಲಿ:
ಕಾಫಿ ಕೇವಲ ರುಚಿ ಮತ್ತು ತಾಜಾತನ ನೀಡುವ ಪಾನೀಯವಲ್ಲ; ಇದು ತೂಕ ಇಳಿಸುವುದರಿಂದ ಹಿಡಿದು ಸ್ನಾಯುಗಳಿಗೂ ಇದು ಬಲ ನೀಡುತ್ತದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಕಾಫಿಯಲ್ಲಿ ಇರುವ ಕೆಫೀನ್ ಪಾರ್ಶ್ವವಾಯು, ಟೈಪ್ 2 ಮಧುಮೇಹ, ಹೃದಯಾಘಾತ ಮುಂತಾದವುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಅಧ್ಯಯನದ ಬಗ್ಗೆ ಒಂದಿಷ್ಟು:
ದಿ ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೈನಾಲಜಿ & ಮೆಟಾಬಾಲಿಸಮ್ನಲ್ಲಿ ಪ್ರಕಟವಾದ ಒಂದು ಮಹತ್ವದ ಅಧ್ಯಯನವು ಯುಕೆ ಬಯೋಬ್ಯಾಂಕ್‌ನ 188,000 ಜನರ ಕಾಫಿ ಹಾಗೂ ಟೀ ಸೇವನೆ ಕುರಿತು ಮಾಹಿತಿಯನ್ನು ಪರಿಶೀಲಿಸಿದೆ. ಅವರಲ್ಲಿ ಸುಮಾರು 172,000 ಜನರ ಪ್ರತಿಕ್ರಿಯೆಯನ್ನು ವಿಶ್ಲೇಷಿಸಿದಾಗ, ದಿನಕ್ಕೆ 2–3 ಕಪ್ ಕಾಫಿ ಅಥವಾ 3 ಕಪ್ ಟೀ ಕುಡಿಯುವವರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಕಡಿಮೆಯಾಗಿದೆ ಎಂಬುದನ್ನು ಪತ್ತೆಹಚ್ಚಲಾಯಿತು.
ಹೃದಯ ಆರೋಗ್ಯ ಮತ್ತು ಕಾರ್ಡಿಯೊಮೆಟಾಬಾಲಿಕ್ ಕಾಯಿಲೆಗೂ ಕಾಫಿ ಮದ್ದು!
ದಿನಕ್ಕೆ 200–300 ಮಿಗ್ರಾಂ ಕೆಫೀನ್ ಸೇವಿಸುವವರು, ಕಡಿಮೆ ಪ್ರಮಾಣ ಸೇವಿಸುವವರಿಗಿಂತ ಕಾರ್ಡಿಯೊಮೆಟಾಬಾಲಿಕ್ ಕಾಯಿಲೆ ಎದುರಿಸುವ ಅಪಾಯವನ್ನು ಕಡಿಮೆ ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಕಾಫಿ ಮತ್ತು ಟೀ ಎರಡೂ ಉರಿಯೂತವನ್ನು ಕಡಿಮೆ ಮಾಡುತ್ತವೆ ಹಾಗೂ ರಕ್ತನಾಳಗಳನ್ನು ಆರೋಗ್ಯಕರವಾಗಿರಿಸುತ್ತವೆ.
ಕಾಫಿಯಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ಜೀವಕೋಶಗಳ ಹಾನಿಯಿಂದ ರಕ್ಷಿಸುತ್ತವೆ. ಕಾಫಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.
ಲಾಸ್ಟ್ ಸಿಪ್:
ಮಿತ ಪ್ರಮಾಣದಲ್ಲಿ ಸೇವಿಸಿದ ಕಾಫಿ ಮತ್ತು ಚಹಾವು ಕೇವಲ ದೈನಂದಿನ ತಾಜಾತನವನ್ನಷ್ಟೇ ನೀಡುವುದಿಲ್ಲ, ದೀರ್ಘಕಾಲದ ಆರೋಗ್ಯವನ್ನು ನೀಡುತ್ತದಂತೆ. ಆದ್ದರಿಂದ, ದಿನಕ್ಕೆ 1–3 ಕಪ್ ಕಾಫಿ ಕುಡಿಯೋದು ಉತ್ತರ ಆರೋಗ್ಯದಾರಿ.


















