ಬೆಂಗಳೂರು: ಹಿರಿಯನಟ, ಕಿರುತೆರೆ ಕಲಾವಿದ ಶಂಕರ್ರಾವ್ (84) ಅವರು ವಯೋಸಹಜ ಅನಾರೋಗ್ಯದಿಂದ ಸೋಮವಾರ ನಿಧನರಾದರು.
ಶಂಕರರಾವ್ ಮೂಲತಃ ತುಮಕೂರಿನವರು. 1956ರಲ್ಲಿ ಬೆಂಗಳೂರಿಗೆ ಬಂದ ಅವರು. ‘ಗೆಳೆಯರ ಬಳಗ’ ಎಂಬ ರಂಗತಂಡ ಕಟ್ಟಿ ಅದರ ಮೂಲಕ ನಾಟಕ ಪ್ರದರ್ಶನ ಮಾಡುತ್ತಿದ್ದರು. ‘ನಟರಂಗ’ ತಂಡದ ಜೊತೆಗೂ ಶಂಕರ್ ರಾವ್ ಗುರುತಿಸಿಕೊಂಡಿದ್ದರು.
ನಾಟಕಗಳಲ್ಲಿ ಶಂಕರರಾವ್ ಅಭಿನಯ ನೋಡಿದ ನಿರ್ಮಾಪಕರೊಬ್ಬರು ‘ಯಾರ ಸಾಕ್ಷಿ’ ಸಿನಿಮಾದಲ್ಲಿ ಅವರಿಗೆ ಮೊದಲ ಅವಕಾಶ ನೀಡಿದರು. ನಂತರ ಶಂಕರ್ ರಾವ್ ಅವರಿಗೆ ಸಾಲು ಅವಕಾಶಗಳು ಸಿಕ್ಕಿದವು.
‘ಪಾಪಪಾಂಡು’ ಧಾರಾವಾಹಿಯ ಬಾಲ್ ರಾಜ್, ‘ಧ್ರುವ’ ಹಾಗೂ ‘ಅಪ್ಪು’ ಚಿತ್ರಗಳ ಉಪನ್ಯಾಸಕ, ‘ಬಿಸಿಬಿಸಿ’ ಚಿತ್ರದಲ್ಲಿ ರಸಿಕ ಮನಸ್ಸಿನ ತಾತ… ಹೀಗೆ ಹಲವು ಪಾತ್ರಗಳು ಚಿತ್ರರಸಿಕರ ಮನಗೆದ್ದಿದ್ದವು.