ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ದಸರಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ. ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮೀ ದೇವಾಲಯದಲ್ಲಿ ದಸರಾ ಪ್ರಯುಕ್ತ ನವದುರ್ಗೆಯರ ಪ್ರತಿಷ್ಠಾಪನೆ ನಡೆದಿದೆ. ದೇವರ ಸೇವೆಯ ಜೊತೆಗೆ ಕರಾವಳಿಯ ಸಂಸ್ಕೃತಿ ಆಚಾರ ವಿಚಾರ ಪ್ರತಿಬಿಂಬಿಸುವ ಆಕರ್ಷಕ ವಸ್ತು ಪ್ರದರ್ಶನ ಲಕ್ಷಾಂತರ ಜನರ ಗಮನ ಸೆಳೆಯುತ್ತಿವೆ.
ಉಡುಪಿ ಜಿಲ್ಲೆಯ ಉಚ್ಚಿಲದಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ, ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವೈಭವದಿಂದ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ಶಾರದಾ ಮಾತೆಗೆ ಆರತಿ ಬೆಳಗಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಬಳಿಕ ವೇದಿಕೆಯಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ದಸರಾ ಕಾರ್ಯಕ್ರಮವನ್ನ ದಸರಾ ಮಹೋತ್ಸವದ ಗೌರವ ಸಲಹೆಗಾರ ನಾಡೋಜ ಜಿ.ಶಂಕರ್ ಉದ್ಘಾಟಿಸಿದ್ರು. ಹೌದು, ಈ ಹನ್ನೊಂದು ದಿನಗಳ ಕಾಲ ನಡೆಯುವ ದಸರಾಕ್ಕೆ ಕೇವಲ ಉಡುಪಿ ಜಿಲ್ಲೆಯಷ್ಟೇ ಅಲ್ಲದೆ ಹೊರ ಜಿಲ್ಲೆ ಹೊರ ರಾಜ್ಯದ ಲಕ್ಷಾಂತರ ಜನರು ಉಚ್ಚಿಲ ಮಹಾಲಕ್ಷ್ಮಿ ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ. ಸತತ 11 ದಿನಗಳ ಕಾಲ ಇಲ್ಲಿ ವೈಭವದ ಧಾರ್ಮಿಕ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಮಹಾಲಕ್ಷ್ಮಿ ದೇವಿಯ ದರ್ಶನಕ್ಕೆ ಬಂದ ಭಕ್ತರು ಇಲ್ಲಿ ಪ್ರತಿಷ್ಠಾಪಿಸಿರುವ ನವ ದುರ್ಗೆಯರ ದರ್ಶನ ಮಾಡುತ್ತಿದ್ದಾರೆ. ದೇವಿಯ ನಾನಾ ರೂಪಗಳ ಮನಮೋಹಕ ಪ್ರತಿಮೆಗಳು ಭಕ್ತರ ಕಣ್ಮನ ಸೆಳೆಯುತ್ತಿದೆ. ಪ್ರತಿ ದಿನ ಸಾವಿರಾರು ಭಕ್ತರಿಗೆ ಅನ್ನದಾಸೋಹ ಏರ್ಪಾಟಾಗಿದೆ.
ಕರಾವಳಿಯ ಪ್ರವಾಸೋದ್ಯಮದ ದೃಷ್ಟಿಯಿಂದ ಉಚ್ಚಿಲ ಮಹಾಲಕ್ಷ್ಮಿ ಕ್ಷೇತ್ರ, ಮಹತ್ವದ ಕೇಂದ್ರವಾಗಿದೆ. ದೇವರ ಸೇವೆಯ ಜೊತೆಗೆ ಕರಾವಳಿಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ನಾಡೋಜ ಜಿ ಶಂಕರ್ ಕಳೆದ ಮೂರು ವರ್ಷಗಳಿಂದ ಉಚ್ಚಿಲ ದಸರಾ ಗೆ ಪೋಷಕರಾಗಿದ್ದಾರೆ.
ಜನಸೇವೆಯೇ ಜನಾರ್ದನ ಸೇವೆ ಎಂಬಂತೆ, ವಸ್ತು ಪ್ರದರ್ಶನ ಕಲಾಪ್ರದರ್ಶನಗಳನ್ನು ಏರ್ಪಡಿಸಿ ಕರಾವಳಿಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ವಿವಿಧ ಮೀನುಗಳ ಪ್ರದರ್ಶನ, ಮರಳು ಶಿಲ್ಪ, ವಿವಿಧ ಕಲಾಕೃತಿ ಪ್ರದರ್ಶನ, ವಿಶೇಷ ಮಕ್ಕಳ ಕೈಯಲ್ಲಿ ತಯಾರಾದ ಕಲಾಕೃತಿ ಪ್ರದರ್ಶನ ಸೇರಿದಂತೆ ಹಲವು ಕಲಾಸಾಧಕರ ಕೈಯಲ್ಲಿ ತಯಾರಾದ ಕಲಾಕೃತಿಗಳ ಕಲಾಲೋಕ ಉಚ್ಚಿಲ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಅನಾವರಣಗೊಂಡಿದೆ. ಇದು ಪ್ರಮುಖ ಜನಾಕರ್ಷಣೆ ಕೇಂದ್ರ ಬಿಂದುವಾಗಿದ್ದು ನಾಡೋಜ ಜಿ.ಶಂಕರ್ ಸೇರಿದಂತೆ ಹಲವು ಗಣ್ಯರು ಕಲಾಪ್ರದರ್ಶನ ಅನಾವರಣಗೊಳಿಸಿದ್ರು.
ಒಟ್ಟಾರೆ ನವರಾತ್ರಿಯ ಎಲ್ಲಾ 11 ದಿನಗಳಲ್ಲಿ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕೊನೆಯ ದಿನ ಅದ್ದೂರಿ ದಸರಾ ಮೆರವಣಿಗೆ ಏರ್ಪಾಟಾಗಿದೆ. ಮುಖ್ಯವಾಗಿ ಕಾಪು ಕಡಲತೀರದಲ್ಲಿ ನವದುರ್ಗೆಯರ ವಿಸರ್ಜನೆ ಮೊದಲು ನಡೆಯುವ ಗಂಗಾರತಿಗೆ ಎಲ್ಲರೂ ಕಾತುರರಾಗಿದ್ದಾರೆ. ಸಧ್ಯ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಉಚ್ಚಿಲದತ್ತ ಮುಖ ಮಾಡಿದ್ದಾರೆ.


















