ಉಡುಪಿ: ಎರಡು ಪ್ರತ್ಯೇಕ ಪ್ರಕರಣ; ಕಾರಿನ ಗ್ಲಾಸ್ ಒಡೆದು ಲ್ಯಾಪ್ ಟಾಪ್ ಕಳವು

ಉಡುಪಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಲ್ಯಾಪ್ ಟಾಪ್ ಕಳವು ಮಾಡಿರುವ ಎರಡು ಪ್ರತ್ಯೇಕ ಪ್ರಕರಣಗಳು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

ಕೊರಂಗ್ರಪಾಡಿ ನಿವಾಸಿ ರಕ್ಷಾ ಯು ಎಂಬವರು ಮಾ. 11ರಂದು ಉಡುಪಿ ಸಿಟಿ ಬಸ್ ನಿಲ್ದಾಣದ ರಾಜ್ ಟವರ್ಸ್ ಸಮೀಪ ಉಡುಪಿ- ಮಣಿಪಾಲ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಸುಜುಕಿ ಸ್ಟೀಫ್ ಕಾರಿನ ಹಿಂಭಾಗದ ಎಡಬದಿಯ ಗ್ಲಾಸ್ ಅನ್ನು ಒಡೆದು ಹಿಂಬದಿಯ ಸೀಟಿನಲ್ಲಿದ್ದ ಎಸರ್ ಕಂಪೆನಿಯ ಲ್ಯಾಪ್ ಟಾಪ್ ಕಳವು ಮಾಡಿದ್ದಾರೆ.

ಲ್ಯಾಪ್ ಟಾಪ್ ನ ಮೌಲ್ಯ 25 ಸಾವಿರ ಆಗಿದ್ದು, ಕಾರಿನ ಗ್ಲಾಸ್ ಒಡೆದ ಪರಿಣಾಮ 4 ಸಾವಿರ ನಷ್ಟ ಉಂಟಾಗಿದೆ. ನಿನ್ನೆ ಸಂಜೆ 5ರಿಂದ 7.30ರ ಅವಧಿಯಲ್ಲಿ ಈ ಕಳ್ಳತನ ನಡೆದಿದೆ ಎಂದು ರಕ್ಷಾ ದೂರಿನಲ್ಲಿ ತಿಳಿಸಿದ್ದಾರೆ.

ಅದೇ ರೀತಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ. ನಮನ್ ಅಗಾರ್ವಾಲ್ ಎಂಬವರು ಗುರುವಾರ ರಾತ್ರಿ 7.20ಕ್ಕೆ ಉಡುಪಿ ಬೃಂದಾವನ ಸರ್ಕಲ್  ಬಳಿಯ ಉಡುಪಿ ಗ್ಲಾಸ್ ಹೌಸ್ ಎದುರಿನ ರಸ್ತೆಯ ಬದಿಯಲ್ಲಿ ಬಲೇನೋ ಕಾರು ನಿಲ್ಲಿಸಿ ಹೋಗಿದ್ದರು.

ಆದರೆ ಅವರು 7.40ರ ಸುಮಾರಿಗೆ ಬಂದು ನೋಡುವಾಗ ಕಾರಿನ ಹಿಂಭಾಗದ ಎಡಬದಿಯ ಗ್ಲಾಸ್ ನ್ನು ಯಾರೋ ಕಳ್ಳರು ಒಡೆದು, ಹಿಂಬದಿಯ ಸೀಟಿನಲ್ಲಿದ್ದ ₹ 70 ಸಾವಿರ ಮೌಲ್ಯದ ಲೆನೋವಾ ಕಂಪೆನಿಯ ಲ್ಯಾಪ್ ಟಾಪ್ ನ್ನು ಕಳವು ಮಾಡಿದ್ದಾರೆ. ಹಾಗೆ ಕಾರಿನ ಗ್ಲಾಸ್ ಒಡೆದ ಪರಿಣಾಮ ₹ 20 ಸಾವಿರ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.