ಶೀರೂರು ಪರ್ಯಾಯ ಭಕ್ತರ ಪರ್ಯಾಯ: ಡಾ.ಸರಳತ್ತಾಯ

ಉಡುಪಿ: ಭಗವಾನ್ ಕೃಷ್ಣ ಎಲ್ಲರ ಮನೆ ಮನದ ಮಗು. ಎಲ್ಲರಿಗೂ ಆಪ್ತ. ಆತನಿಗೆ ಸಮರ್ಪಿಸುವ ಎಲ್ಲಾ ಕಾಣಿಕೆ ಎಲ್ಲೂ ಹೋಗದೆ ಮನೆಯ ಮಗುವಿನ ಏಳ್ಗೆಗೆ ಕಾರಣವಾಗುತ್ತದೆ. ಹೊರೆಕಾಣಿಕೆಯೂ ಇದಕ್ಕೆ ಹೊರತಾಗಿಲ್ಲ. ಶೀರೂರು ಪರ್ಯಾಯ ಅದು ಭಕ್ತರ ಪರ್ಯಾಯ ಎಂದು ಭಾವೀ ಪರ್ಯಾಯ ಮಠದ ದಿವಾನ ಡಾ.ಉದಯಕುಮಾರ ಸರಳತ್ತಾಯ ಹೇಳಿದರು.

ಅವರು ಪರ್ಯಾಯ ಪೂರ್ವಬಾವೀ ಹೊರಕಾಣಿಕೆ-ಸಾಂಸ್ಕೃತಿಕ ಹಾಗೂ ಪ್ರಚಾರ ಕುರಿತಾದ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತಾಡಿದರು.
ಉಡುಪಿಯ ಕೃಷ್ಣನದ್ದು ಬಾಲರೂಪ. ಶೀರೂರು ಮಠಾಧೀಶರು ಅದೇ ವಯೋಮಾನದವರು. ಶೀರೂರು ಮಠವೆಂದರೆ ಹಿಂದಿನಿಂದಲೂ ಉಡುಪಿಯ ಜನತೆಗೆ ಅಚ್ಚುಮೆಚ್ಚು. ಪರ್ಯಾಯವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಉದಯ ಕಿಚನ್ ಮಾಲಕ ರಮೇಶ ಬಂಗೇರ ಹೇಳಿದರು. ಹೊರೆಕಾಣಿಕೆಯನ್ನು ಎಂಟು ವಿಭಾಗದಲ್ಲಿ ವಿಭಾಗಿಸಿದ್ದೇವೆ. ಹಳ್ಳಿಹಳ್ಳಿಯ ಪ್ರತಿ ಮನೆಯೂ ಹೊರಕಾಣಿಕೆಯಲ್ಲಿ ಭಾಗವಹಿಸಲು ಯೋಜನೆ ಮಾಡಲಾಗಿದೆ ಎಂದು ಪರ್ಯಾಯ ಸ್ವಾಗತ ಸಮಿತಿಯ ಸಂಚಾಲಕರೂ ಆಗಿರುವ ಸುಪ್ರಸಾದ್ ಶೆಟ್ಟಿ ಮಾತಾಡಿದರು.

ಅಧ್ಕಕ್ಷತೆ ವಹಿಸಿದ್ದ ಶಾಸಕ ಯಶಪಾಲ್ ಸುವರ್ಣ ಸರ್ವರ ಸಹಕಾರ ಕೋರಿದರು. ಸಭೆಯನ್ನು ಉದ್ದೇಶಿಸಿ ಮಟ್ಟಾರ್ ರತ್ನಾಕರ ಹೆಗ್ಡೆ, ರಮೇಶ್ ಕಾಂಚನ್, ಜಯಪ್ರಕಾಶ ಕೆದ್ಲಾಯ, ಗೋಪಾಲಕೃಷ್ಣ ಅಸ್ರಣ್ಣ ಮೊದಲಾದವರು ಮಾತಾಡಿದರು.

ಸಭೆಯಲ್ಲಿ ಹೊರೆಕಾಣಿಕೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಚಾರ ಸಿದ್ಧತೆಯ ಕುರಿತಾಗಿಯೂ ಚರ್ಚಿಸಲಾಯಿತು. ಅಶ್ವತ್ಥ ಭಾರದ್ವಾಜ್ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.