ಉಡುಪಿ: ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿಗೆ ಶಶಿ ತರೀಕೆರೆ ಆಯ್ಕೆ

ಉಡುಪಿ: ವಿಶ್ವ ಭಾರತ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಿತ ಕವಿ ಕುರಾಡಿ ಸೀತಾರಾಮ ಅಡಿಗರ ನೆನಪಿನ ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗೆ ಬೆಂಗಳೂರಿನ ಶಶಿ ತರೀಕೆರೆ ಅವರ ‘ಪ್ಯೂಪಾ’ ಕವನ ಸಂಕಲನ ಆಯ್ಕೆಯಾಗಿದೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾದ ರವಿರಾಜ್ ಎಚ್. ಪಿ. ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಸಂಸ್ಥೆಯು 2024ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಕಟಣೆಗೊಂಡ ಕವನ ಸಂಕಲನಗಳನ್ನು ಪ್ರಶಸ್ತಿಗೆ ಆಹ್ವಾನಿಸಿತ್ತು. ಅದರಂತೆ ಪ್ರಶಸ್ತಿಗೆ 88 ಕೃತಿಗಳು ಬಂದಿದ್ದು, ಕನ್ನಡ ಸಾಹಿತ್ಯ ಲೋಕದ ಹಿರಿಯ ಪ್ರಸಿದ್ಧ ಲೇಖಕ ಶೂದ್ರ ಶ್ರೀನಿವಾಸ್ ಮತ್ತು ಪ್ರಸಿದ್ಧ ವಿಮರ್ಶಕ ಪ್ರೊ. ಎಚ್. ದಂಡಪ್ಪ ಅವರು ತೀರ್ಪುಗಾರರಾಗಿ ಸಹಕರಿಸಿದ್ದರು ಎಂದರು.

ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾರ್ದನ್ ಮಾತನಾಡಿ, ಪ್ರಶಸ್ತಿಯು 10 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಅಂಬಲಪಾಡಿಯ ಮಹಾಕಾಳಿ ಜನಾರ್ದನ ದೇವಸ್ಥಾನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವ ನಾಥ ಶೆಣೆೈ, ವಿಶ್ವ ಭಾರತ ಕರ್ನಾಟಕ ಪ್ರತಿಷ್ಠಾನದ ನಿರ್ದೇಶಕ ನಾರಾಯಣ ಮಡಿ ಹಾಗೂ ಕವಿತಾ ಎನ್. ಮಡಿ ಉಪಸ್ಥಿತರಿದ್ದರು.